ಇನ್ನು ಸ್ವಲ್ಪೇ ದಿನ ನಿಮ್ಮೆಲ್ಲರ ಮನಸ್ಸಲ್ಲಿ ಓ ಮೈ ಲವ್ ಸಿನಿಮಾದ ಆ ಹಾಡು ಗುಯ್ ಗುಡೋದ್ರಲ್ಲಿ ಡೌಟೇ ಇರಲ್ಲ. ನಾವ್ ಯಾಕ್ ಇಷ್ಟು ಕಾನ್ಫಿಡೆಂಟ್ ಆಗಿ ಹೇಳ್ತಿದ್ದೀವಿ ಅಂದ್ರೆ ಆ ಹಾಡಿನ ಸ್ಟ್ರೆಂತ್ ಅಷ್ಟಿದೆ. ಓ ಮೈ ಲವ್ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರೋ ಸಿನಿಮಾ. ಅಕ್ಷಿತ್ ಶಶಿಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ ಈ ಚಿತ್ರ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ನಾಗೇಂದ್ರ ಪ್ರಸಾದ್ ಸಾಹಿತ್ಯದ ‘ಏನಾಯ್ತೋ ಕಾಣೆ ಏನಾಯ್ತೋ ಕಾಣೆ ತಂಗಾಳಿ ಸುರಿದಂತೆ ತಂಪಾದೆ’ ಅನ್ನೋ ಸಾಲುಗಳೇ ಕಿವಿಗೆ ಇಂಪೆನಿಸಿದೆ. ವಿ ಮುರುಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ ಆದ್ರೆ ಇದ್ರಲ್ಲೂ ಕಾಮಿಡಿ ಇದೆ.. ಸೆಂಟಿಮೆಂಟ್ ಇದೆ.. ಭರ್ಜರಿ ಆ್ಯಕ್ಷನ್ ಕೂಡ ಇದೆ. ಹೀಗಾಗಿ ಓ ಮೈ ಲವ್ ಎಲ್ಲಾ ವರ್ಗದವರನ್ನು ಸೆಳೆಯೋದಕ್ಕೆ ರೆಡಿಯಾಗಿದೆ. ಈಗಾಗ್ಲೇ ಬಳ್ಳಾರಿ ದರ್ಬಾರ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರೋ ಸ್ಮೈಲ್ ಶ್ರೀನು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಷ್ಟೇ ಅಲ್ಲ ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜಿಸಿಬಿ ಲಾಂಛನದಲ್ಲಿ ಜಿ ರಾಮಾಂಜಿನಿ ಬಂಡವಾಳ ಹೂಡಿದ್ದಾರೆ. ಅದರ ಜೊತೆಗೆ ಕಥೆ ಬರೆಯೋ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈಗಾಗ್ಲೇ ಸಿನಿಮಾ 90 ಪರ್ಸೆಂಟ್ ಚಿತ್ರೀಕರಣ ಮುಗಿಸಿದೆ ಓ ಮೈ ಲವ್ ಸಿನಿಮಾ. ಇನ್ನುಳಿದಿರೋದು ಮೂರು ಹಾಡುಗಳ ಚಿತ್ರೀಕರಣವಷ್ಟೇ. ಏನಾಯ್ತೋ ಕಾಣೆ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಕೇಳುಗರಿಗೆ, ಸಂಗೀತ ಪ್ರಿಯರನ್ನ ಸೆಳೆಯೋದ್ರಲ್ಲಿ ಡೌಟೆ ಇಲ್ಲ ಅಂತಿದ್ದಾರೆ ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನು. ಚಿತ್ರದಲ್ಲಿ ಕಲಾ ಸಾಮ್ರಾಟ್ ಎಸ್ ನಾರಾಯಣ್ ತೆಲುಗು ಖಳನಟ ದೇವ್‍ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಹಾಗೂ ಇತರರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಹಾಲೇಶ್ ಎಸ್. ಅವರ ಛಾಯಾಗ್ರಹಣ, ರಿಯಲ್ ಸತೀಶ್ ಅವರ ಸಾಹಸ, ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿ.ಮುರಳಿ ಅವರ ನೃತ್ಯ ನಿರ್ದೇಶನ, ಡಿ.ಮಲ್ಲಿ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ.