ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಭಾರೀ ತಯಾರಿ ನಡೆಯುತ್ತಿದೆ. ಅದರಂತೆ ಯಾವ ಕ್ಷೇತ್ರಗಳಲ್ಲಿ ನಿಂತರೆ ಉತ್ತಮ ಎಂಬುದರ ಬಗ್ಗೆಯೂ ಚರ್ಚೆಗಳು ಅಭ್ಯರ್ಥಿಗಳ ನಡುವೆ ನಡೆಯುತ್ತಿದೆ. ಇತ್ತಿಚೆಗಷ್ಟೇ ಮೋದಿ ಸರ್ ನೇಮ್ ವಿಚಾರವಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವೇ ಅನರ್ಹಗೊಂಡಿತ್ತು. ಹಾಗೇ ಈ ಬಾರಿಯ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದೇ ಅನುಮಾನವಾಗಿತ್ತು. ಆದರೆ ಅದೆಲ್ಲವೂ ತೆರವುಗೊಂಡಿದ್ದು, ಇದೀಗ ರಾಹುಲ್ ಗಾಂಧಿ ಮರಳಿ ತನ್ನ ಸ್ಥಾನ ಪಡೆದುಕೊಂಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದಾನೇ ಸ್ಪರ್ಧೆ ಮಾಡ್ತಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಹೇಳಿದ್ದಾರೆ. ಈ ಮಧ್ಯೆ ಪ್ರಿಯಾಂಕ ಗಾಂಧಿ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ. ಈ ಬಗ್ಗೆಯೂ ಅಜಯ್ ರಾವ್ ಉತ್ತರಿಸಿದ್ದಾರೆ.
ಪ್ರಿಯಾಂಕ ಗಾಂಧಿ ಅವರ ಸ್ಪರ್ಧೆ ವಿಚಾರದಲ್ಲಿ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಪ್ರಿಯಾಂಕ ಗಾಂಧಿ ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡ್ತಾರೆ. ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧೆ ಮಾಡಲು ಬಯಸಿದರೆ ಅಲ್ಲಿಯೂ ಸ್ಪರ್ಧೆ ಮಾಡ್ತಾರೆ. ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೋ ಅಲ್ಲಿ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡುತ್ತಾರೆ ಎಂದಿದ್ದಾರೆ.