ಬೆಂಗಳೂರು: ಕಾಲ ಬದಲಾದಂತೆ, ವಾತಾವರಣ ಬದಲಾದಂತೆ ಕೃಷಿಯ ಮಾದರಿಯೂ ಬದಲಾಗಬೇಕಾದ ಅನಿವಾರ್ಯತೆ ಇದೆ. ಆದ್ರೆ ರೈತರಿಗೆ ಈ ವಿಚಾರದಲ್ಲಿ ಸಾಕಷ್ಟು ಮಾರ್ಗದರ್ಶನದ ಅಗತ್ಯತೆಯೂ ಇದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೃಷಿ ಸಂಬಂಧಿಸಿದಂತೆ ಆ್ಯಪ್ ಬರಲಿದೆಯಂತೆ. ಈ ಸಂಬಂಧ ಸಚಿವ ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ಕೃಷಿಗೆ ಸಂಬಂಧಿಸಿದಂತೆ ಬುದ್ದಿ ಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಆ್ಯಪ್ ಒಂದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ. ಈ ಮೂಲಕ ಹವಮಾನ ಮತ್ತು ಮಣ್ಣಿನ ಗುಣಮಟ್ಟ ತಿಳಿದುಕೊಳ್ಳುವುದಕ್ಕೆ ಸುಲಭವಾಗಿ ಮಾಹಿತಿ ಸಿಗಲಿದೆ. ಇದು ಎಐ ಆಧಾರಿತ ಸೂಪರ್ ಆ್ಯಪ್ ಮೂಲಕ ಸಾಧ್ಯವಾಗುತ್ತದೆ. ಬೀಜ, ಬೆಳೆ ಮಾದರಿ ಸೇರಿದಂತೆ ಹಲವು ವಿಚಾರಗಳಿಗೆ ಈ ಆ್ಯಪ್ ಉಪಯೋಗವಾಗಲಿದೆ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆ ಆಧಾರಿತ ಆ್ಯಪ್ಗೆ ಫೀಡ್ ಮಾಡಬಹುದಾಗಿದೆ. ಇದು ರೈತರ ಅಗತ್ಯಗಳಿಗೆ ಅನುಗುಣವಾಗಿ ಮಾಹಿತಿಯನ್ನು ಒದಗಿಸಲಿದೆ. ಇದಲ್ಲದೆ, ಈ ಆ್ಯಪ್ 14 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ. ಈಗಿರುವ ಕಾಲ್ ಸೆಂಟರ್ ಗಳು ರೈತರಿಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಿನ ಗೊಂದಲವನ್ನು ಉಂಟುಮಾಡುತ್ತಿದ್ದವು. ಆದ್ದರಿಂದ, ನಾವು ಈ ಎಲ್ಲಾ ಸಹಾಯವಾಣಿಗಳನ್ನು ವಿಲೀನಗೊಳಿಸಲು ಮತ್ತು ರೈತರಿಗೆ ಮಾಹಿತಿ ನೀಡಲು ಕಾಲ್ ಸೆಂಟರ್ ಅನ್ನು ಸ್ಥಾಪಿಸಲು ನಿರ್ಧರಿಸಿದ್ದೆವು ಎಂದಿದ್ದಾರೆ.