ಬೆಂಗಳೂರು: ದೇವಸ್ಥಾನಗಳ ಜೀರ್ಣೋದ್ಧಾರಕ್ಕೆಂದು ನೀಡುತ್ತಿದ್ದ ಅನುದಾನವನ್ನು ತಡೆ ಹಿಡಿಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಮುಖವಾದ ಮೂರು ವಿಷಯಗಳ ಆಧಾರದ ಮೇಲೆ ಅನುದಾನ ತಡೆಹಿಡಿಯಲಾಗಿದೆ.
ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ/ಜೀರ್ಣೋದ್ದಾರಕ್ಕಾಗಿ/ ಸಾಮಾನ್ಯ ಯೋಜನೆ ಅಡಿಯಲ್ಲಿ ಅನುದಾನ ಮುಂಜೂರಾಗಿದೆ. ಈ ಕಾಮಗಾರಿಗಳನ್ನು ಪ್ರಾರಂಭಿಸದೇ ಇರುವ ಸಂಸ್ಥೆಗಳಿಗೆ ಮುಂದಿನ ನಿರ್ದೇಶನದವರೆಗೂ ಹಣ ಬಿಡುಗಡೆ ಮಾಡಬಾರದು.
2022-23ನೇ ಸಾಲಿನಲ್ಲಿ ಮುಂಜೂರಾಗಿರುವ ಅನುದಾನದ ಪೈಕೆ ಈಗಾಗಲೇ ಶೇಕಡಾ 50 ರಷ್ಟು ಹಣ ಬಿಡುಗಡೆಯಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಹಣ ಬಿಡುಗಡೆ ಮಾಡದಿದ್ದಲ್ಲಿ ಸದರಿ ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಬಾರದು. ಹಾಗೂ ಕಾಮಗಾರಿಯನ್ನು ಪ್ರಾರಂಭಿಸದೇ ಇದ್ದಲ್ಲಿ ಕಾಮಗಾರಿಯನ್ನು ಪ್ರಾರಂಭಿಸತಕ್ಕದ್ದಲ್ಲ.
ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಮುಂದಿನ ನಿರ್ದೇಶನದವರೆಗೆ ತಡೆಹಿಡಿಯುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯೂ ರಾಜ್ಯ ಸರ್ಕಾರ ಬಳಿ ಈ ಮೂರು ವಿಷಯಗಳನ್ನು ಪ್ರಸ್ತಾಪಿಸಿತ್ತು. ಬಳಿಕ ಜೀರ್ಣೋದ್ಧಾರಕ್ಕೆಂದು ನೀಡುವ ಅನುದಾನವನ್ನು ತಡೆಹಿಡಿಯಲು ಕೇಳಿತ್ತು. ಇದೀಗ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.