ಕಳೆದ ಕೆಲವು ದಿನಗಳಿಂದ ಟಮೋಟೋ ಬೆಲೆ ಗಗನಕ್ಕೇರಿದೆ. ಟಮೋಟೋ ಇಲ್ಲದೆ ಸಾಂಬಾರು ಮಾಡುವುದು ಕಷ್ಟ ಸಾಧ್ಯ. ಆದರೂ ಹಾಗೋ ಹೀಗೋ ಮನೆಯ ಹೆಣ್ಣು ಮಕ್ಕಳು ಎರಡು ಟಮೋಟೋ ಜಾಗಕ್ಕೆ ಒಂದನ್ನು ಹಾಕಿ, ಹುಣಸೆ ಹಣ್ಣನ್ನು ಬೆರೆಸಿ ಹೇಗೋ ಬ್ಯಾಲೆನ್ಸ್ ಮಾಡ್ತಾ ಇದ್ದಾರೆ. ಇಷ್ಟು ದಿನ ಆಯ್ತು. ಇನ್ನಾದರೂ ಟಮೋಟೋ ಬೆಲೆ ಕಡಿಮೆಯಾಗಬಹುದು ಎಂದು ಕಾಯುತ್ತಿದ್ದವರಿಗೆ ಮತ್ತಷ್ಟು ಏರಿಕೆಯಾಗುವ ಸೂಚನೆ ಸಿಕ್ಕಿದೆ.
ಅದು ಒಂದಲ್ಲ ಎರಡಲ್ಲ. 300ರ ಗಡಿದಾಟುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ 120 ರೂಪಾಯಿ ಟಮೋಟೋ ತೆಗೆದುಕೊಳ್ಳುವುದಕ್ಕೆ ಜನ ಕಣ್ಣು ಬಾಯಿ ಬಿಡುತ್ತಿದ್ದಾರೆ. ನ್ಯಾಷನಲ್ ಕಮಾಡಿಟಿ ಮ್ಯಾನೇಜ್‌ಮೆಂಟ್ ಸರ್ವಿಸಸ್ ಲಿಮಿಟೆಡ್ ಹೇಳುವ ಪ್ರಕಾರ ಇನ್ನು 2 ತಿಂಗಳ ಕಾಲ ಟಮೋಟೋ ಬೆಲೆ ಇಳಿಕೆಯಾಗುವುದಿಲ್ಲ. ಬದಲಿಗೆ ಏರಿಕೆಯಾಗಲಿದೆ ಎನ್ನಲಾಗಿದೆ.
ಈಗಾಗಲೇ ದೆಹಲಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಟಮೋಟೋ ಕೆಜಿಗೆ 250 – 300 ಆಗಿದೆ. ಈಗ ಕರ್ನಾಟಕದಲ್ಲೂ ಹೆಚ್ಚಾಗುವ ದಿನ ಹತ್ತಿರದಲ್ಲಿಯೇ ಇದೆ. ಟಮೋಟೋ ಬೆಳೆದಿರುವವರಂತು ಈ ವರ್ಷ ಕುಬೇರರಾಗಿದ್ದಾರೆ. ಉತ್ತಮ ಮಳೆಯಾಗದೆ ಇದ್ದಲ್ಲಿ, ಮಳೆಗಾಲದ ಆರಂಭದಲ್ಲಿ ಕೆಲವೊಂದು ತರಕಾರಿಗಳ ಬೆಲೆ ಗಗನಕ್ಕೇರುವುದು ಸಹಜ. ಆ ಸಮಯಕ್ಕೆ ತಕ್ಕನಾದ ತರಕಾರಿ ಬೆಳೆದವನೇ ಅದೃಷ್ಟವಂತನಾಗಿರುತ್ತಾನೆ. ಈಗ ಟಮೋಟೋ ಬೆಳೆಗಾರರ ಅದೃಷ್ಟ ಖುಲಾಯಿಸಿದಂತೆ.