ಹಾನಗಲ್: ಬೊಮ್ಮಾಯಿ ಅವರು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಏನೇನೋ ಮಾತನಾಡುತ್ತಿದ್ದಾರೆ ಅವುಗಳಿಗೆ ಬೇರೆ ಸಮಯದಲ್ಲಿ ಉತ್ತರ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹೇಳಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ ಕೊಟ್ಟರಾ? ಬೀದಿ ವ್ಯಾಪಾರಿಗಳಿಗೆ ಪರಿಹಾರ ಕೊಟ್ಟರಾ? ಚಿಕಿತ್ಸೆಯಿಂದ ಆಕ್ಸಿಜನ್ ವರೆಗೂ ಎಲ್ಲದಕ್ಕೂ ಕ್ಯೂ ನಿಲ್ಲುವಂತೆ ಮಾಡಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಇಲಿಗಳಂತೆ ವಿಲ, ವಿಲ ಒದ್ದಾಡಿ ಪ್ರಾಣ ಬಿಟ್ಟರು. ಒಬ್ಬ ಶಾಸಕ, ಮಂತ್ರಿ ಅವರನ್ನು ಭೇಟಿ ಮಾಡಿ ಸಹಾಯ ಮಾಡಲಿಲ್ಲ. ನಾನು, ಸಿದ್ದರಾಮಯ್ಯ ಹಾಗೂ ಧೃವನಾರಾಯಣ್ ಅವರು ಹೋಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ರಾಜ್ಯ ಸರಕಾರದವರು ಕೇಂದ್ರಕ್ಕೆ ಆಕ್ಸಿಜನ್ ಸಮಸ್ಯೆಯಿಂದ ಒಬ್ಬರೂ ಸತ್ತಿಲ್ಲ ಎಂದು ವರದಿ ಕೊಟ್ಟಿದ್ದಾರೆ. ನಾವು ನಿಮ್ಮ ಪರವಾಗಿ ಮನೆ, ಮನೆಗೂ ಹೋಗಿ ಅವರಿಗೆ 1 ಲಕ್ಷ ರು. ನೆರವು ನೀಡಿ, ಸಾಂತ್ವನ ಹೇಳಿದ್ದೇವೆ. ರಾಜ್ಯದುದ್ದಗಲಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ.
ಬಿಜೆಪಿಯವರು ಕೇವಲ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅವರು ರೈತ, ಕಾರ್ಮಿಕ, ಕೋವಿಡ್ ಸೋಂಕಿತರು, ಸತ್ತವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ. ಆದರೂ ಅದ್ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ. ಶ್ರೀನಿವಾಸ ಮಾನೆ ಅವರು ಆಪದ್ಭಾಂದವ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ವೃತ್ತಿ ಉಳಿಸಿಕೊಂಡು ಬಂದವರಿಗೆ, ಉದ್ಯೋಗ ಕಳೆದುಕೊಂಡವರ ಮನೆಗೆ ಹೋಗಿ ತಲಾ 2 ಸಾವಿರ ರೂಪಾಯಿ ಚೆಕ್ ಕೊಟ್ಟು ಬಂದಿದ್ದಾರೆ. ಮಾನೆ ಅವರು ಕೊಟ್ಟಿದ್ದು ನಿಜಾನೋ, ಸುಳ್ಳೋ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಮಾಲೀಕ. ಅವನ ತೀರ್ಮಾನವೇ ಮುಖ್ಯ. ಯಾವುದೇ ಸರ್ಕಾರವಾಗಲಿ ಅವನ ಕಷ್ಟಕ್ಕೆ ಸ್ಪಂದಿಸಬೇಕು ಎಂದರು.