ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ,(ಜು.17) : ತೋಟದಲ್ಲಿ ಬೆಳೆಯುತ್ತಿರುವ ಹೂವಿನ ಬೆಳೆಗೆ ರೋಗ ಆವರಿಸಿದ್ದು ಇದನ್ನು ತಡೆಯಲು ಮಾಡಿದ ಹಲವಾರು ಕ್ರಮಗಳು ಸಹಾ ಸಹಕಾರ ಮಾಡಿಲ್ಲ ಇದನ್ನು ಪ್ರತಿಭಟಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹೂವನ್ನು ಹಾಕಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳೆಗಾರರು ಪ್ರತಿಭಟನೆಯನ್ನು ನಡೆಸಿದರು.
ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ಹೂವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸುಮಾರು 4 ವರ್ಷದಿಂದ ಹೂವಿಗೆ ನುಸಿ ರೋಗದ ಬಾದೆಯು ಹೆಚ್ಚಾಗಿದ್ದು, ಯಾವುದೇ ಔಷಧಿ ಸಿಂಪಡಿಸಿದರೂ ನುಸಿ ರೋಗ ಹತೋಟಿಗೆ ಬರುತ್ತಿಲ್ಲ. ಅನೇಕ ಅಂಗಡಿಗಳಲ್ಲಿ ಬಯೋ ಕಂಪನಿ ಔಷಧಿಯನ್ನು ಮಾರಾಟ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ರವರಿಗೆ ಸಾಕಷ್ಟು ಬಾರಿ ಗಮನಕ್ಕೆ ಬಂದಿದ್ದರೂ ಸಹ ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಈ ಕಳಪೆ ಔಷಧಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಹೂವಿನ ಕೃಷಿಯನ್ನು ಒಂದು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಅಲ್ಪಸ್ವಲ್ಪ ಅಚ್ಚುಕಟ್ಟು ಜಮೀನಿನಲ್ಲಿ ಹೂವಿನ ಕೃಷಿಯನ್ನು ಮಾಡುತ್ತಿದ್ದು, ದಿನನಿತ್ಯ ಮನೆ ಖರ್ಚಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೂಗಳನ್ನು ಬೆಳೆಯುತ್ತಿದ್ದು ಈ ಐದಾರು ವರ್ಷಗಳಿಂದ ನುಸಿಹುಳು ಹೆಚ್ಚಾಗಿದ್ದು, ಹೂಗಳನ್ನು ತಿಂದು ಹಾಕುತ್ತಿದ್ದು ತೋಟಗಾರಿಕೆ ಇಲಾಖೆಯವರಿಗೂ ಹಾಗೂ ಕೃಷಿಇಲಾಖೆಯವರಿಗೂ ಮನವಿ ಮಾಡಿದ್ದರೂ ಸಹ ರೈತರ ತೋಟಕ್ಕೆ ಬಂದು ಯಾವುದೇ ರೀತಿ ರೈತರಿಗೆ ಸಲಹೆ ನೀಡಿರುವುದಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಕೃಷಿ ಇಲಾಖೆ ಇದೆಯೋ ಇಲ್ಲವೆಂಬುದು ರೈತರಿಗೆ ಗೊತ್ತಾಗಬೇಕು. ನುಸಿಹುಳು ರೈತರ ಬದುಕನ್ನು ನುಂಗಿಹಾಕುತ್ತಿದೆ. ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಧನಂಜಯ, ಮುಖಂಡರಾದ ಭೂತಯ್ಯ, ಮಂಜಪ್ಪ ಶಿವನಕೆರೆ, ಸಿ.ನಾಗರಾಜು ಮುದ್ದಾಪುರ, ಎಸ್.ಟಿ.ಚಂದ್ರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಕ್ಲಹಳ್ಳಿ ರವಿಕುಮಾರ್, ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಎಂ.ಬಿ.ತಿಪ್ಪೇಸ್ವಾಮಿ ಕಾಂತರಾಜು, ಮೂರ್ತಿ, ಮಹಂತಣ್ಣ, ಶಾಂತಣ್ಣ, ಮಲ್ಲಿಕಾರ್ಜನ ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.