ಬೆಂಗಳೂರು : ಕಡಲ ತೀರದ ಭಾರ್ಗವನ ಬಗ್ಗೆ ಈಗಾಗ್ಲೇ ನೀವೂ ಸಾಕಷ್ಟು ಸಲ ಕೇಳಿದ್ದೀರಿ. ಇದು ಕಾರಂತರ ಜೀವನ ಕಥೆ ಅಲ್ಲ ಅನ್ನೋದು ಈಗಾಗ್ಲೇ ನಿಮ್ಮ ಗಮನಕ್ಕೂ ಬಂದಿದೆ. ಮೊದಲ ಟೀಸರ್ ನೋಡಿ ಭಾರ್ಗವನ ದರ್ಶನವನ್ನು ಮಾಡಿರ್ತೀರಿ.. ಆದ್ರೆ ಇದೀಗ ಅದೇ ಭಾರ್ಗವ ಮತ್ತೊಂದು ಟೀಸರ್ ನಲ್ಲಿ ಡಿಫ್ರೆಂಟ್ ಆಗಿ ಕಾಣ್ತಿದ್ದಾನೆ.
ಮೊದಲ ಟೀಸರ್ ನಲ್ಲೇ ಡೈಲಾಗ್, ಮೇಕಿಂಗ್ ಭರವಸೆಯನ್ನ ಹುಟ್ಟಿಸಿತ್ತು. ಇದೀಗ ಮತ್ತೊಂದು ಟೀಸರ್ ಇನ್ನೊಂದು ಹೆಜ್ಜೆ ಮುಂದಕ್ಕೆ ಕರೆದುಕೊಂಡು ಹೋಗಿದೆ. ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಲೋಕೆಷನ್ ಕಣ್ಮನ ಸೆಳೆದರೆ, ಡೈಲಾಗ್ ಮನಸೂರೆಗೊಳಿಸುತ್ತಿದೆ. ಪ್ರೀತಿಯ ನಿಜವಾದ ಅರ್ಥ ಹೇಳಿಕೊಟ್ಟಿದ್ದಾನೆ. ಪ್ರೀತಿ ಅಂದ್ರೆ ಏನು ಎಂಬ ಪ್ರಶ್ನೆ ಹುಟ್ಟುಹಾಕಿದ್ದಾನೆ. ಪ್ರೀತಿ ಮಾಡಿದ್ರೆ ಸಂಗಾತಿಯ ಜೊತೆಗೆ ಹೇಗಿರಬೇಕು ಎಂಬ ಬಗ್ಗೆ ಭಾರ್ಗವ ತಿಳಿಸಿದ್ದಾನೆ. ಪ್ರೀತಿಯಿದೆ.. ಅದ್ಭುತ ಹಾಡಿದೆ.. ಫೈಟ್ ಇದೆ.. ಒಂಟಿತನದ ಕೂಗಿದೆ.. ನನ್ನವರಿಲ್ಲದ ಬದುಕೆಂಬ ಬೇಸರವಿದೆ.. ಈ ಎಲ್ಲವೂ ಟೀಸರ್ ನಲ್ಲಿ ಅಡಗಿದ್ದು.. ಮತ್ತೆ ಮತ್ತೆ ಟೀಸರ್ ನೋಡಬೇಕೆನ್ನಿಸುವಷ್ಟು ವೀಕ್ಷಕರ ಮನಸ್ಸನ್ನ ಕದಡಿದೆ ಎಂದರೆ ಅತಿಶಯೋಕ್ತಿ ಎನಿಸಲ್ಲ.
ಟೈಟಲ್ ಲಾಂಚ್ ಆದಾಗಲೇ ಸಾಕಷ್ಟು ಸದ್ದು ಮಾಡಿತ್ತು ಸಿನಿಮಾ. ಇದು ಶಿವರಾಮ ಕಾರಂತರ ಜೀವನ ಕಥೆ ಇರಬಹುದಾ ಎಂಬ ಪ್ರಶ್ನೆ ಹುಟ್ಟು ಹಾಕಿತ್ತು.. ಆದ್ರೆ ಇದು ಕಥೆಗೆ ಸೂಕ್ತವಾದ ಹೆಸರು ಎಂದಷ್ಟೇ ಸಿನಿಮಾ ತಂಡ ಕ್ಲ್ಯಾರಿಟಿ ನೀಡಿತ್ತು. ಈಗಾಗ್ಲೇ ಸಿನಿಮಾ ಸಿದ್ಧವಾಗಿದ್ದು, ಥಿಯೇಟರ್ ಗೆ ಬರೋ ಸಿದ್ಧತೆಯಲ್ಲಿದೆ. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇವಕಲ ಸ್ಟುಡಿಯೋ ಮೂಲಕ ವರುಣ್ ರಾಜು ಹಾಗೂ ಭರತ್ ಬಂಡವಾಳ ಹೂಡಿದ್ದಾರೆ. ನಿರ್ಮಾಣದ ಜೊತೆ ಜೊತೆಗೆ ನಾಯಕರಾಗಿ ನಟಿಸಿದ್ದಾರೆ. ಶೃತಿ ಪ್ರಕಾಶ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಉಡುಪಿ, ಮುರುಡೇಶ್ವರ ಕಡಲತೀರಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರಕ್ಕೆ ಅನಿಲ್ ಸಿ.ಜೆ. ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್, ಉಮೇಶ್ ಸಂಕಲನವಿದೆ.