ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, (ಜು.10) : ಭರತಮುನಿಯಿಂದ ಆರಂಭವಾದ ಭರತನಾಟ್ಯ ಪರಂಪರೆ ವಿಶ್ವದಲ್ಲಿಯೇ ಪ್ರಸಿದ್ದಿ ಪಡೆದಿದೆ ಎಂದು ದಕ್ಷಿಣ ಪ್ರಾಂತ್ಯ ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ರಾಜೀವಲೋಚನ ಹೇಳಿದರು.
ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ನಾಟ್ಯರಂಜನಿ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದಲ್ಲಿ ಜಿ.ಕಿರಣ್‍ರವರು ಆರಂಭಿಸಿರುವ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ ಬೆಳ್ಳಿ ಮಹೋತ್ಸವ ಪೂರೈಸಿರುವುದು ಶ್ಲಾಘನೀಯ. ನೃತ್ಯ ಯೋಗ, ಸಂಗೀತ, ಪಥಚಲನೆಯಿಂದ ಕೂಡಿರುವುದರಿಂದ ಇಡಿ ವಿಶ್ವದಲ್ಲಿಯೇ ಅದ್ಬುತ ಕಲೆಯಾಗಿ ಹೊರಹೊಮ್ಮಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಂಜನಾ ನೃತ್ಯ ಕಲಾ ಕೇಂದ್ರದ ನೃತ್ಯ ಶಿಕ್ಷಕಿ ಡಾ.ನಂದಿನಿ ಶಿವಪ್ರಕಾಶ್ ಮಾತನಾಡಿ ಪಠ್ಯದ ಜೊತೆ ಮಕ್ಕಳು ಇಂತಹ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬಹುದು ಎಂದು ತಿಳಿಸಿದರು.
ನೃತ್ಯ, ಸಂಗೀತ, ಲಲಿತಕಲೆಯಲ್ಲಿ ಮಕ್ಕಳನ್ನು ತೊಡಗಿಸಿ ಪೋಷಕರುಗಳು ಸಂಸ್ಕಾರ, ಸಂಸ್ಕøತಿಯನ್ನು ಕಲಿಸಬೇಕಿದೆ. ನಾಟ್ಯರಂಜನಿ ಕಲಾ ಕೇಂದ್ರ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾವಿರಾರು ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದೆ ಎಂದು ಗುಣಗಾನ ಮಾಡಿದರು.
ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ಹೇಮಂತ್‍ರಾಜ್ ಮಾತನಾಡಿ ನೃತ್ಯಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ತಮಿಳುನಾಡಿನ ರುಕ್ಮಿಣಿದೇವಿ ಅರುಂಡೆ ದೇಶಾದ್ಯಂತ ಜಗತ್ತಿನಾದ್ಯಂತ ನೃತ್ಯವನ್ನು ತಲುಪಿಸಿದರು. ಮಕ್ಕಳು ನೃತ್ಯದಲ್ಲಿ ತಲ್ಲೀನರಾದಾಗ ಇಡಿ ಶರೀರವೆ ಚಲನಶೀಲವಾಗಿರುತ್ತದೆ. ಸಮಾಜ ಅನೇಕ ಅಡೆತಡೆ, ಆತಂಕಗಳನ್ನು ಎದುರಿಸುತ್ತಿರುವ ಇಂತಹ ದಿನಮಾನಗಳಲ್ಲಿ ನೃತ್ಯ ಕಲೆ ಮನಸ್ಸಿಗೆ ಮುದ ನೀಡುತ್ತದೆ. ಅದಕ್ಕಾಗಿ ನೃತ್ಯವನ್ನು ಮತ್ತಷ್ಠು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ಹೇಳಿದರು.
ನೃತ್ಯ ಶಿಕ್ಷಕಿ ಲಾಸಿಕಾ ಫೌಂಡೇಶನ್‍ನ ಶ್ರೀಮತಿ ಶ್ವೇತ ಭಟ್ ಮಾತನಾಡುತ್ತ ನೃತ್ಯ ಎನ್ನುವುದು ಕೇವಲ ಹೆಣ್ಣಿಗಷ್ಠೆ ಮೀಸಲಲ್ಲ. ಬೆಂಗಳೂರಿನಲ್ಲಿ ಪುರುಷ ನೃತ್ಯ ಕಲಾವಿದರಿಗೆ ಬಹಳ ಬೇಡಿಕೆಯಿದೆ. ಸಂಗೀತ ನೃತ್ಯದಲ್ಲಿ ಮಕ್ಕಳು ತೊಡಗಿಸಿಕೊಂಡಾಗ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯ. ನೃತ್ಯದ ಜೊತೆ ಸಾಹಿತ್ಯ, ಸಂಗೀತದ ಕಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ನಾಟ್ಯರಂಜನಿ ಕಲಾ ಕೇಂದ್ರದ ಕಾರ್ಯದರ್ಶಿ ಜಿ.ಕಿರಣ್, ಅಂಜನಾ ನೃತ್ಯ ಕಲಾ ಕೇಂದ್ರದ ಶಿವಪ್ರಕಾಶ್, ರಂಗ ಕಲಾವಿದ ಕೆ.ಪಿ.ಎಂ.ಗಣೇಶಯ್ಯ, ಲಾಸಿಕ ಫೌಂಡೇಶನ್‍ನ ಮಂಜುನಾಥ ಭಾಗವತ್ ವೇದಿಕೆಯಲ್ಲಿದ್ದರು.
ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ, ಅಂಜನಾ ನೃತ್ಯ ಕಲಾ ಕೇಂದ್ರ ಹಾಗೂ ಲಾಸಿಕ ಫೌಂಡೇಶನ್‍ನ ಮಕ್ಕಳು ನೃತ್ಯ ಪ್ರದರ್ಶಿಸಿದರು.