ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈಗಾಗಲೇ ಎಲ್ಲಾ ಸಚಿವರಿಗೂ ಖಾತೆಯನ್ನು ಹಂಚಲಾಗಿದೆ. ಆದ್ರೆ ಖಾತೆ ಹಂಚಿಕೆಯಲ್ಲೂ ಒಂದಷ್ಟು ಜನರು ಅಸಮಾಧಾನಗೊಂಡಿದ್ದಾರೆ. ಇದೀಗ ಎಂಬಿ ಪಾಟೀಲ್ ಖಾತೆ ವಿಚಾರಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, 2013ರಿಂದ 2018ರವರೆಗೆ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ. ವಿಜಯಪುರಕ್ಕೆ ಈ ಮೊದಲು ಬರಗಾಲದ ಜಿಲ್ಲೆ ಎಂಬ ಹೆಸರಿತ್ತು. ಆದ್ರೆ ಆ ಹಣೆಪಟ್ಟಿಯಯನ್ನು ತೆಗೆದು ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೆ. ನನ್ನ ಇಚ್ಛೆ ಈಗಲೂ ನೀರಾವರಿ ಇಲಾಖೆಯನ್ನು ನಿಭಾಯಿಸುವುದೇ ಆಗಿದೆ ಎಂದಿದ್ದಾರೆ.
ಕಾರಣಾಂತರಗಳಿಂದ, ಸಿಎಂ ಪರಮಾಧಿಕಾರದಿಂದ ಖಾತೆ ಬದಲಾವಣೆಯಾಗಿದೆ. ಮುಖ್ಯಮಂತ್ರಿಗಳು ನನ್ನನ್ನು ಬೇರೆ ಖಾತೆಯನ್ನು ನಿಭಾಯಿಸುತ್ತೀಯಾ ಎಂದು ಕೇಳಿದರು. ಅದಕ್ಕೆ ನಾನು ಬೃಹತ್ ಕೈಗಾರಿಕೆ ಆಯ್ಕೆ ಮಾಡಿಕೊಂಡಿದ್ದೇನೆ. ಈಗ ನಾನು ಕೈಗಾರಿಕ ಸಚಿವರಾಗಿ ಸೇವೆ ಮಾಡುತ್ತಿದ್ದೇನೆ ಎಂದಿದ್ದಾರೆ.