ಕನಕಪುರ: ಡಿಕೆ ಶಿವಕುಮಾರ್ ಡಿಸಿಎಂ ಹುದ್ದೆಗೆ ಸಮಾಧಾನಗೊಂಡಿದ್ದಾರೆ. ಮನಸ್ಸಲ್ಲಿ ಸಿಎಂ ಆಸೆ ಇದ್ದರು ಪಕ್ಷಕ್ಕೋಸ್ಕರ ಸಿಕ್ಕಿದ್ದನ್ನೆ ತೃಪ್ತಿದಾಯಕವಾಗಿ ನಿಭಾಯಿಸುತ್ತಿರುವ ರೀತಿ ಕಾಣುತ್ತಿದೆ. ಸಿಎಂ ಸ್ಥಾನ ಬೇಕೇ ಬೇಕು ಎಂದು ಹಠ ಹಿಡಿದಿದ್ದ ಡಿಕೆ ಶಿವಕುಮಾರ್, ಹೈಕಮಾಂಡ್ ಮಾತಿಗೆ ತಣ್ಣಗಾಗಿದ್ದರು. ಇಲ್ಲಿಯವರೆಗೂ ಸಿಎಂ ಹುದ್ದೆ ಬಿಟ್ಟು ಕೊಡಲು ಕಾರಣವೇನು ಎಂಬುದನ್ನು ಹೇಳಿಕೊಂಡಿರಲಿಲ್ಲ.
ಇದೀಗ ಮೊದಲ ಬಾರಿಗೆ ಸಿಎಂ ಹುದ್ದೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಇಂದು ಭೇಟಿ ನೀಡಿದ್ದೆಉ. ಕಾರ್ಯಕರ್ತರು, ಬೆಂಬಲಿಗರು ಸೇರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಎಂ ಸ್ಥಾನ ಕೈತಪ್ಪಿದರ ಬಗ್ಗೆ ಮಾತನಾಡಿದ್ದಾರೆ.
“ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ನೀವೆಲ್ಲಾ ಆಸೆಪಟ್ರಿ. ಅದಕ್ಕೆ ವೋಟ್ ಕೂಡ ಹಾಕಿದ್ರಿ. ಆದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಒಂದು ತೀರ್ಮಾನ ಮಾಡಿಕೊಂಡರು. ಖರ್ಗೆ ಅವರು ಕೂಡ ನನಗೆ ಹಿತ ವಚನ ನೀಡಿದರು. ಏನ್ಮಾಡ್ತೀರಿ. ನಾನು ಹಿರಿಯರ ಮಾತಿಗೆ ತಲೆ ಬಾಗಲೇಬೇಕಲ್ಲವಾ. ತಾಳ್ಮೆಯಿಂದ ಇರಬೇಕು. ನೀವೆಲ್ಲಾ ಆಸೆ ಇಟ್ಟುಕೊಂಡಿದ್ದೀರಿ. ಆ ನಿಮ್ಮ ಆಸೆ ಯಾವತ್ತೂ ಕೂಡ ಹುಸಿಯಾಗುವುದಿಲ್ಲ ಎಂದು ಮತ್ತೊಮ್ಮೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.