ಬೆಂಗಳೂರು: ಎಲ್ಲೆಡೆ ಶಾಲೆಗಳು ಆರಂಭವಾಗಿದೆ. ಮಕ್ಕಳು ಶಾಲೆಗೆ ಹೋಗುವುದಕ್ಕೆ ಆರಂಭಿಸಿದ್ದಾರೆ. ಇದರ ಮಧ್ಯೆ ಪಠ್ಯ ಪುಸ್ತಕ, ಸಮವಸ್ತ್ರದ ವಿಚಾರವೂ ಮುಖ್ಯವಾಗಿದೆ. ಜೊತೆಗೆ ಸಾಕಷ್ಟು ಕಡೆ ಶಿಕ್ಷಕರ ಕೊರತೆಯೂ ಇದೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಬೇರೆ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳೋಣಾ. ಮೊದಲು ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರವನ್ನು ಮೊದಲು ನೀಡಿ ಎಂದು ಸೂಚನೆ ನೀಡಿದ್ದೇನೆ. ಶಿಕ್ಷಕರ ನೇಮಕಾತಿಯೂ ಅಷ್ಟೇ ಹಂತ ಹಂತವಾಗಿ ನಡೆಯುತ್ತೆ. ಮೊದಲು ವರ್ಗಾವಣೆ ಗೊಂದಲ ಇತ್ತು. 87 ಸಾವಿರ ಅರ್ಜಿದಾರರು ಶಿಕ್ಷಕರ ಹುದ್ದೆಯನ್ನು ಬಯಸುತ್ತಿದ್ದಾರೆ. 20-25 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದ್ದೇನೆ. ಅದರ ಪ್ರಕ್ರಿಯೆ ಶೀಘ್ರವೇ ಆರಂಭವಾಗುತ್ತದೆ.
ಪಠ್ಯ ಪುಸ್ತಕದ ವಿಚಾರ ಮಕ್ಕಳಿಗೆ ಏನು ಬೇಕು ಎಂಬುದನ್ನು ನೋಡಿಕೊಂಡು ಅದನ್ನು ನೀಡುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾಗುತ್ತೆ ಅಂತ ಹೇಳಿದ್ವಿ. ಈಗಾಗಲೇ ಪಠ್ಯ ಪುಸ್ತಕಗಳು ಶಾಲೆಗೆ ಹೋಗಿದೆ. ಅದನ್ನು ತಡೆಯಲು ಆಗಿಲ್ಲ. ಮಕ್ಕಳ ಭವಿಷ್ಯಕ್ಕೆ ಯಾವ ವಿಚಾರ ಬೇಕು ಎಂಬುದನ್ನು ನೋಡಿಕೊಂಡು, ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಾಗುವುದು ಎಂದಿದ್ದಾರೆ.