ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.16) : ದಲಿತರ ಪರವಾಗಿದ್ದೇವೆಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಪಟ್ಟವನ್ನು ಲಿಂಗಾಯಿತ ಮತ್ತು ಒಕ್ಕಲಿಗರು ಮಾತ್ರ ಅನುಭವಿಸಿಕೊಂಡು ಬರುವುದಾದರೆ ದಲಿತರು ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಯಾವಾಗ ಎಂದು ಐಮಂಗಲದ ಹರಳಯ್ಯ ಗುರುಪೀಠದ ಮಾದಾರ ಹರಳಯ್ಯ ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ ಮಾದಿಗ ಯುವ ಸೇನೆಯಿಂದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಸಂವಿಧಾನ ವಿರೋಧಿ ಸರ್ಕಾರವನ್ನು ತಿರಸ್ಕರಿಸಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ಗೆ ಸ್ಪಷ್ಠ ಬಹುಮತ ನೀಡಿದ್ದಾರೆ. ಇದರಲ್ಲಿ ಮಾದಿಗ ಸಮುದಾಯದ ಪಾತ್ರ ಬಹಳಷ್ಠಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾಗಿದ್ದರೂ ಎರಡು ಮೂರು ಜಾತಿಯವರು ಮಾತ್ರ ಕರ್ನಾಟಕದ ಮುಖ್ಯಮಂತ್ರಿಗಳಾಗುತ್ತಿದ್ದಾರೆ. ದಲಿತರು ಮುಖ್ಯಮಂತ್ರಿಗಳಾಗಲು ಅರ್ಹತೆಯಿಲ್ಲವೇ? ಎಡಗೈ ಬಲಗೈನಲ್ಲಿ ಅನೇಕ ದಲಿತರಿದ್ದಾರೆ. ಸಂವಿಧಾನ ಪರವಾಗಿದ್ದೇವೆಂದು ಹೇಳುತ್ತಿರುವ ಕಾಂಗ್ರೆಸ್ ಸಿರಿವಂತರನ್ನೇ ಮುಖ್ಯಮಂತ್ರಿನ್ನಾಗಿ ಆಯ್ಕೆ ಮಾಡಿಕೊಂಡು ಬರುತ್ತಿದೆ. ದಲಿತರು ಯಾವಾಗ ಮುಖ್ಯಮಂತ್ರಿಯಾಗಬೇಕು? ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯ ಈಡೇರುವುದು ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರು ಸಾಮಾಜಿಕಾಗಿ ಅಷ್ಟೆ ಅಲ್ಲ. ರಾಜಕೀಯವಾಗಿಯೂ ಅಸ್ಪøಶ್ಯರಾಗಿದ್ದಾರೆ. ಒಂದು ವರ್ಷವಾದರೂ ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕೊಡಿ. ದಲಿತ ಸಮುದಾಯದಲ್ಲಿ ಯಾರಿಗಾದರೂ ಕೊಡಿ. ಎಡಗೈ, ಬಲಗೈ ಎರಡು ಒಗ್ಗಟ್ಟಾಗಿದೆ. ಛಿದ್ರಗೊಳಿಸಬೇಡಿ. ದಲಿತರ ಪರವಾಗಿದ್ದೇವೆಂಬ ಸಂದೇಶ ಕೊಡಿ ಎಂದು ಕಾಂಗ್ರೆಸ್ ನಾಯಕರುಗಳಲ್ಲಿ ಸ್ವಾಮೀಜಿ ಮನವಿ ಮಾಡಿದರು.
ಕರ್ನಾಟಕ ಮಾದಿಗ ಯುವ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕರಿಯಪ್ಪ ಎಸ್.ಪಾಲವ್ವನಹಳ್ಳಿ ಮಾತನಾಡಿ 1989 ರಲ್ಲಿ ಮುದೋಳ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ 27 ನೇ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾದ ಆರ್.ಬಿ.ತಿಮ್ಮಾಪುರ್ ಅವರಿಗೆ ಈ ಬಾರಿಯ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಎಸ್.ಎಂ.ಕೃಷ್ಣರವರ ಸಚಿವ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಅಪಾರ ಅನುಭವವುಳ್ಳ ಆರ್.ಬಿ.ತಿಮ್ಮಾಪುರ್‍ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಡಿ.ಕುಮಾರ್, ಕಣ್ಮೇಶ್, ಆರ್.ಚಂದ್ರಶೇಖರ್, ಚಿದಾನಂದಮೂರ್ತಿ, ಟಿ.ಶಫಿವುಲ್ಲಾ, ಭೀಮರಾಜ್, ವೆಂಕಟೇಶ್ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.