ಚಿತ್ರದುರ್ಗ, (ಏ.23) ; 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಪಟ ವಿಶ್ವದ ಮೊದಲ ಸಂಸತ್ ಆಗಿದ್ದು, ಅದರಲ್ಲೂ ದೇಶದ ಲೋಕಸಭೆ, ಶಾಸನಸಭೆಗೆ ತಾಯಿಬೇರು ಆಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ತಾಲೂಕಿನ ಸೀಬಾರ ಬಳಿ ಭಾನುವಾರ ಆಯೋಜಿಸಿದ್ದ ಸರಳ ಬಸವ ಜಯಂತ್ಯುತ್ಸವದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಪ್ಪಗೌರವ ಸಲ್ಲಿಸಿ ಮಾತನಾಡಿದರು.
ಬಸವಣ್ಣನ ಚಿಂತನೆ ಮತ್ತು ದೇಶದ ಸಂವಿಧಾನದ ಆಶಯ ಒಂದೇ ರೀತಿ ಇದ್ದು, ಬಡವರು, ಸಾಮಾನ್ಯರು, ಗ್ರಾಮೀಣ ಪ್ರದೇಶದ ಜನರು ಅದರಲ್ಲೂ ಮಹಿಳೆಯರ ಬದುಕು ಉತ್ತಮಗೊಳ್ಳಬೇಕು ಎಂಬ ಗುರಿ ಹೊಂದಿದೆ ಎಂದರು.
ಯುಗಗಳು ಉರುಳಿದರೂ ಬಸವಣ್ಣನ ಪ್ರಯೋಗಗಳು ಸಮಾಜದಲ್ಲಿ ಸದಾ ಜೀವಂತ ಆಗಿರುತ್ತವೆ. ಅವುಗಳನ್ನು ಸಮಾಜದಲ್ಲಿ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಬಸವಣ್ಣ `ಇವನಾರವ ಎನ್ನದೇ ಇವ ನಮ್ಮವ’ ಎನ್ನುವ ಸಂದೇಶ ನೀಡುವ ಮೂಲಕ ಸರ್ವ ಜಾತಿ, ಧರ್ಮದವರನ್ನು ಪ್ರೀತಿಯಿಂದ ಕಾಣಬೇಕು. ಆ ಚಿಂತನೆಯಡಿಯೇ ನಾಡಿನಲ್ಲಿನ ಮಠಗಳು ಅಕ್ಷರ, ಅನ್ನ, ಜ್ಞಾನ ದಾಸೋಹ ಮೂಲಕ ಲಕ್ಷಾಂತರ ಬಡ ಮಕ್ಕಳ ಭವಿಷ್ಯ ರೂಪಿಸಿವೆ. ಜಗತ್ತಿಗೆ ಬಸವತತ್ವ ಪರಿಚಯಿಸುವ ಕೆಲಸ ಮಾಡಿವೆ. ಅದರಲ್ಲೂ ಚಿತ್ರದುರ್ಗ ಜಿಲ್ಲೆಯಲ್ಲಿನ ಮಠ-ಮಾನ್ಯಗಳು ಈ ನಿಟ್ಟಿನಲ್ಲಿ ಬಹುದೊಡ್ಡ ಕೆಲಸ ಮಾಡುತ್ತಿರುವುದು ಜಿಲ್ಲೆಗೆ ಹೆಮ್ಮೆ ವಿಷಯ ಎಂದು ಹೇಳಿದರು.
ಬಸವಣ್ಣ ಒಂದು ವರ್ಗಕ್ಕೆ ಸೀಮಿತ ವ್ಯಕ್ತಿಯಲ್ಲ, ಅವರ ವಿಚಾರಗಳು ಸರ್ವ ಸಮುದಾಯದ ಪ್ರಗತಿಗೆ ಬೇಕಾದ ಸಾರ್ವಕಾಲಿಕ ಮೌಲ್ಯಗಳು. ಬಸವಣ್ಣನನ್ನು ಧರ್ಮ ಪ್ರವರ್ತಕನನ್ನಾಗಿ ನೋಡುವ ಜತೆಗೆ ಸಾಂಸ್ಕೃತಿಕ ರಾಯಭಾರಿಯನ್ನಾಗಿ ವಿಶ್ವಕ್ಕೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಪ್ರತಿಪಾದಿಸಿದರು.
ಬಸವಣ್ಣನ ತತ್ವಾದರ್ಶಗಳು ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತ. 10-12ನೇ ಶತಮಾನದಲ್ಲಿ ಭಕ್ತಿಯ ಚಿಂತನೆ ಉತ್ತುಂಗ ಸ್ಥಿತಿಯಲ್ಲಿದ್ದ ಸಂದರ್ಭ ಕ್ರಾಂತಿಕಾರಿ ಬದಲಾವಣೆ ಮೂಲಕ ಅದನ್ನು ಸಾಮಾಜಿಕ ಚಿಂತನೆಯಾಗಿ ಬದಲಾಯಿಸಿದ ದೂರದೃಷ್ಟಿ ನಾಯಕ ಬಸವಣ್ಣ ಎಂದು ಬಣ್ಣಿಸಿದರು.
ಬಸವೇಶ್ವರರ ವಚನಗಳಿಗೆ ವಿರುದ್ಧವಾಗಿ ಸಮಾಜದಲ್ಲಿ ಜಾತಿ, ಧರ್ಮದ ವಿಚಾರ ಮುನ್ನಲೆಗೆ ಬರುತ್ತಿದೆ. ಈ ಕುರಿತು ಮಠಗಳು ಜನರನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಸರ್ವಕಾಲಕ್ಕೂ ಸಲ್ಲುವ ತತ್ವ ಸಂದೇಶ ಪಾಲಿಸಿದರೆ ಬಸವಣ್ಣ ಸೇರಿ ಮಹನೀಯರ ಆಶಯ ಅನುಷ್ಠಾನಗೊಂಡು, ನೆಮ್ಮದಿ ಜೀವನ ನಮ್ಮದಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗು ಜಿಪಂ ಮಾಜಿ ಸದಸ್ಯ ಆರ್.ಕೃಷ್ಣಮೂರ್ತಿ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಜಿಲ್ಲಾ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಧುಪಾಲೇಗೌಡ, ವೆಂಕಟೇಶಪುರ ತಿಪ್ಪೇಸ್ವಾಮಿ, ಕೆಪಿಸಿಸಿ ಕೋಆರ್ಡಿನೇಟರ್ ಅನಿಲ್ ಚಿಕ್ಕಂದವಾಡಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವರಾಜ್, ನಿರಂಜನಮೂರ್ತಿ, ವೆಂಕಟೇಶ ಅಯ್ಯಂಗಾರ್, ತೀರ್ಥಪ್ರಸಾದ್, ಜವಳಿ ರೇವಣ್ಣ ಉಪಸ್ಥಿತರಿದ್ದರು.