ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.08) : ಈಗಾಗಲೇ ನಲವತ್ತು ಪರ್ಸೆಂಟ್ ಕಮಿಷನ್ ಕೊಳ್ಳೆ ಹೊಡೆದಿರುವ ವ್ಯಕ್ತಿಯನ್ನು ಮತ್ತೆ ಈ ಚುನಾವಣೆಯಲ್ಲಿ ಗೆಲ್ಲಿಸಿದರೆ ಎಂಬತ್ತು ಪರ್ಸೆಂಟ್ ಹೊಡೆಯುವುದು ಗ್ಯಾರೆಂಟಿ ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ನವ ಚಿತ್ರದುರ್ಗ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆಯಲಾಗಿದ್ದ ನಗರದ 35 ವಾರ್ಡ್‍ಗಳ ಅಧ್ಯಕ್ಷರು, ಬೂತ್ ಹಾಗೂ ಪಂಚಾಯಿತಿ ಮಟ್ಟದ ಅಧ್ಯಕ್ಷರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ನನಗೆ ಪಕ್ಷ ಬಹುದೊಡ್ಡ ಜವಾಬ್ದಾರಿ ಕೊಟ್ಟಿದೆ. ಅದನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ. ವಾರ್ಡ್, ಬೂತ್, ಪಂಚಾಯಿತಿ ಅಧ್ಯಕ್ಷರುಗಳಿಗೆ ಜವಾಬ್ದಾರಿ ಇನ್ನು ದೊಡ್ಡದು. ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ ಬಲಿದಾನದ ಇತಿಹಾಸವಿದೆ. ವ್ಯಕ್ತಿಗಾಗಿ ಕೆಲಸ ಮಾಡಬೇಡಿ. ಪಕ್ಷಕ್ಕಾಗಿ ದುಡಿಯಿರಿ ಒಂದಲ್ಲ ಒಂದು ದಿನ ನಿಮ್ಮನ್ನು ಗುರುತಿಸಿ ಅಧಿಕಾರ ಕೊಡುತ್ತದೆ ಎಂದು ಹೇಳಿದರು.
ಬೂತ್‍ನ ಒಬ್ಬ ಅಧ್ಯಕ್ಷ ಹತ್ತು ಸದಸ್ಯರನ್ನು ನೊಂದಾಯಿಸಿ ಮನೆ ಮನೆಗೆ ಹೋಗಿ ಪಕ್ಷದ ಇತಿಹಾಸ ತಿಳಿಸಿ ಮತವನ್ನಾಗಿ ಪರಿವರ್ತಿಸಿ ಚುನಾವಣೆ ಪಟ್ಟಿಯಲ್ಲಿ ಹೆಸರಿರುತ್ತೆ. ಆದರೆ ಕೆಲವರು ಊರಿನಲ್ಲಿರುವುದಿಲ್ಲ. ಅಂತಹವರನ್ನು ಪತ್ತೆ ಹಚ್ಚಿ ಕರೆ ತಂದು ಮತದಾನ ಮಾಡಿಸುವ ಹೊಣೆಗಾರಿಕೆ ನಿಮ್ಮದು. ಗ್ಯಾರೆಂಟಿ ಕಾರ್ಡ್‍ಗಳನ್ನು ಮನೆ ಮನೆಗೆ ತಲುಪಿಸಿ ಪಂಚಾಯಿತಿ, ವಾರ್ಡ್, ಬೂತ್ ಅಧ್ಯಕ್ಷರುಗಳು ನಿಸ್ವಾರ್ಥವಾಗಿ ಕೆಲಸ ಮಾಡಿ. ಚುನಾಯಿತರಾದವರು ಪಕ್ಷದ ಹೆಸರೇಳಬೇಕೆ ವಿನಃ ವ್ಯಕ್ತಿಯ ಹೆಸರಲ್ಲ ಎಂದು ಸಲಹೆ ನೀಡಿದರು.
ವೇಳಾಪಟ್ಟಿ ಪ್ರಕಾರ ಪ್ರತಿ ಏರಿಯಾ ಬೂತ್‍ಗೆ ಭೇಟಿ ಕೊಡುತ್ತೇನೆ. ಕಳೆದ ಚುನಾವಣೆಯಲ್ಲಿ ನನ್ನ ಜೊತೆಯಿದ್ದ ಕಾರ್ಯಕರ್ತರು, ಅಭಿಮಾನಿಗಳೆ ಈ ಬಾರಿಯೂ ನನ್ನ ಹಿಂದಿದ್ದಾರೆ. ಇಪ್ಪತ್ತೈದು ವರ್ಷಗಳಿಂದ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಇನ್ನು 25 ವರ್ಷಗಳ ಕಾಲ ಪಕ್ಷವನ್ನು ಅಲುಗಾಡಿಸಲು ಯಾರಿಂದಲೂ ಆಗಲ್ಲ. ಸೈನಿಕ ಗಡಿ ಕಾಯುವಂತೆ ನಿಸ್ವಾರ್ಥದಿಂದ ಪಕ್ಷ ಕಾಯಿರಿ. ಮತ್ತೆ ಕೊಳ್ಳೆ ಹೊಡೆಯಲು ಅವಕಾಶ ಕೊಡಬೇಡಿ. ಮುಂದಿನ ಪೀಳಿಗೆಯನ್ನು ರೆಡಿ ಮಾಡುತ್ತಿದ್ದಾರೆನ್ನುವ ಎಚ್ಚರ ನಿಮಗಿರಲಿ ಎಂದು ಕಾರ್ಯಕರ್ತರಿಗೆ ಜಾಗೃತಿಗೊಳಿಸಿದರು.
ನಾನು ಗೆದ್ದರೆ ನೀವು ಗೆದ್ದಂಗೆ, ಊರಿನ ಬದಲಾವಣೆಗಾಗಿ ಕೆಲಸ ಮಾಡಿ ಲಂಚ ಭ್ರಷ್ಠಾಚಾರ ಮುಂದಿನ ದಿನಗಳಲ್ಲಿ ಇರುವುದಿಲ್ಲ. ಕ್ಷೇತ್ರ ಸ್ವಚ್ಚಗೊಳಿಸುವ ಕಾಲ ಬಂದಿದೆ ಕಸ ಗುಡಿಸಿ ಹೊರಗೆ ಹಾಕಿ ಎಂದು ಬೂತ್, ಪಂಚಾಯಿತಿ, ವಾರ್ಡ್ ಅಧ್ಯಕ್ಷರುಗಳಲ್ಲಿ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗುವುದೇ ದೊಡ್ಡ ಸಾಧನೆ. ಪಕ್ಷಕ್ಕೆ 135 ವರ್ಷಗಳ ಇತಿಹಾಸವಿದೆ. ಕೆ.ಸಿ.ವೀರೇಂದ್ರ ಪಪ್ಪಿಯನ್ನು ಬಹುಮತಗಳಿಂದ ಗೆಲ್ಲಿಸಲು ನಿಮ್ಮ ನಿಮ್ಮ ವಾರ್ಡ್, ಬೂತ್, ಪಂಚಾಯಿತಿ ಮಟ್ಟಗಳಲ್ಲಿ ಮನೆ ಮನಗೆ ಹೋಗಿ ಮತ ಕೇಳಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೂಲತಃ ಕಾಂಗ್ರೆಸ್ಸಿನವರೆ. ಕೈಗಾರಿಕಾ ಉದ್ಯಮದಿಂದ ಬಂದವರು. ಚಿತ್ರದುರ್ಗ ವಿಧಾನಸಭೆಗೆ ಸ್ಪರ್ಧಿಸಲು ಹದಿನಾಲ್ಕು ಆಕಾಂಕ್ಷಿಗಳಿದ್ದರು.
ಹೈಕಮಾಂಡ್ ಅಳೆದು ತೂಗಿ ಆಯ್ಕೆ ಮಾಡಿದೆ. ಪಕ್ಷಕ್ಕೆ ಮತ ಕೊಡಲು ಜನ ರೆಡಿಯಿದ್ದಾರೆ. ಅಭ್ಯರ್ಥಿಯೆ ನಮ್ಮ ಬಳಿ ಬರಲಿಲ್ಲ ಎಂದು ಕಾಯಬೇಡಿ. ಅವರ ಪರ ನೀವುಗಳು ಮತಯಾಚಿಸಿ ಎಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 283 ಬೂತ್, 23 ಪಂಚಾಯಿತಿ, ನಗರದಲ್ಲಿ ಮೂವತ್ತೈದು ವಾರ್ಡ್‍ಗಳಿವೆ. ಇಷ್ಟಿದ್ದರೂ ಈ ಬಾರಿಯ ಚುನಾವಣೆಯಲ್ಲಿ ಕೆ.ಸಿ.ವೀರೇಂದ್ರಪಪ್ಪಿಯನ್ನು ಗೆಲ್ಲಿಸದಿದ್ದರೆ ಪಕ್ಷ ದುರ್ಬಲವಾಗುತ್ತದೆ. ಆರ್.ಎಸ್.ಎಸ್. ಬಿಜೆಪಿ. ಯುವಕರ ತಲೆಕೆಡಿಸಿ ಮತ ಸೆಳೆಯುವ ಕುತಂತ್ರ ಮಾಡುತ್ತಿದೆ. 25 ವರ್ಷಗಳಿಂದ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಎ.ಐ.ಸಿ.ಸಿ.ಯಿಂದ ಚಿತ್ರದುರ್ಗಕ್ಕೆ ವೀಕ್ಷಕರಾಗಿ ಬಂದಿರುವ ಚಂದ್ರಕಲಾ ಮಾತನಾಡುತ್ತ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬರನ್ನು ಸಂಪರ್ಕಿಸಿ ಮತವನ್ನಾಗಿ ಪರಿವರ್ತಿಸಿ ಕಾಂಗ್ರೆಸ್ ಉಳಿಯಬೇಕಾಗಿರುವುದರಿಂದ ಈ ಚುನಾವಣೆಯಲ್ಲಿ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ ಪಕ್ಷದಲ್ಲಿ ಲೀಡರ್‍ಗಳು ಜಾಸ್ತಿಯಾಗಿದ್ದಾರೆ. ಮತಗಳು ಕಡಿಮೆಯಾಗಿದೆ. ಸೈನಿಕರಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಕಾಯಬೇಕಿದೆ. ಚುನಾವಣೆಗೆ ಇನ್ನು ಕೇವಲ ಮೂವತ್ತು ದಿನಗಳಿರುವುದರಿಂದ ಪ್ರತಿ ಮನೆ ಮನೆಗೆ ಅಭ್ಯರ್ಥಿ ಭೇಟಿ ಕೊಡಲು ಆಗುವುದಿಲ್ಲ. ಅದಕ್ಕಾಗಿ ವಾರ್ಡ್, ಬೂತ್, ಪಂಚಾಯಿತಿ ಮಟ್ಟದ ಅಧ್ಯಕ್ಷರುಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕೋರಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಆರ್.ನರಸಿಂಹರಾಜ, ಬಿ.ಪಿ.ಪ್ರಕಾಶ್‍ಮೂರ್ತಿ, ಕೆ.ಪಿ.ಸಿ.ಸಿ. ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ರವಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೈಯದ್ ಅಲ್ಲಾ ಭಕ್ಷಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಶ್ರೀರಾಮ್, ಆರತಿ ಮಹಡಿ ಶಿವಮೂರ್ತಿ, ಭಾಗ್ಯಮ್ಮ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್ ಸೇರಿದಂತೆ 35 ವಾರ್ಡ್‍ಗಳ ಅಧ್ಯಕ್ಷರು, ಬೂತ್, ಪಂಚಾಯಿತಿ ಮಟ್ಟದ ಅಧ್ಯಕ್ಷರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.