ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ .ಮಾರ್ಚ್.17: ಚುನಾವಣೆ ಕೆಲಸವನ್ನು ಒತ್ತಡ ಎಂದು ಭಾವಿಸದೇ ಸಂತೋಷದಿಂದ ಕೆಲಸ ನಿರ್ವಹಿಸಿ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಚುನವಣಾ ತರಬೇತಿ ನಿರ್ವಹಣಾ ಕೋಶದ ಸಂಯುಕ್ತಾ ಆಶ್ರಯದಲ್ಲಿ 2023ನೇ ಸಾಲಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ನಿಮಿತ್ತ ಆಯೋಜಿಸಲಾದ ಚುನಾವಣಾ ವೆಚ್ಚ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಖರ್ಚು ವೆಚ್ಚಗಳನ್ನು ದಾಖಲಿಸುವಾಗ ವಿಡಿಯೋ ಹಾಗೂ ಧ್ವನಿ ಮುದ್ರಣದ ಜೊತೆಗೆ ದಾಖಲಿಸಬೇಕು. ಚುನಾವಣ ಆಯೋಗ ಹೊರಡಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಗಾರದಲ್ಲಿ ಚುನಾವಣಾ ವೆಚ್ಚ ಕೋಶ, ಜಿಲ್ಲಾ ಮಾಧ್ಯಮ ಉಸ್ತುವಾರಿ ಸಮಿತಿ, ಲೆಕ್ಕಾಧಿಕಾರಿಗಳ ತಂಡ, ಸಹಾಯಕ ಚುನಾವಣಾ ವೆಚ್ಚ ವೀಕ್ಷಕರ ತಂಡ, ವೀಡಿಯೋ ವೀಕ್ಷಣೆ ಹಾಗೂ ಸರ್ವೇಕ್ಷಣ ತಂಡಗಳ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಡಿ.ಅರ್. ಮಧು ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದ ತರಬೇತಿಯನ್ನು ನೀಡಿದರು.
ಜಿಲ್ಲಾ ಖಜಾನೆಯ ಉಪನಿರ್ದೇಶಕಿ ರತ್ನಕುಮಾರಿ, ಜಿ.ಪಂ.ಯೋಜನಾ ಅಧಿಕಾರಿ ಗಾಯತ್ರಿ, ಹಿರಿಯ ಉಪನ್ಯಾಸಕ ಅಯುಬ್ ಸೊರಬ, ಡಯಟ್ ಹಾಗೂ ಜಿಲ್ಲಾ ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.