ಸುದ್ದಿಒನ್, ಚಿತ್ರದುರ್ಗ, (ಅ.08) : ರಾಜ್ಯದ ಅತ್ಯಂತ ಹಳೆಯ ಜಲಾಶಯಗಳಲ್ಲಿ ಒಂದಾಗಿರುವ ಚಿತ್ರದುರ್ಗದ ಹಿರಿಯೂರಿನ ವಿವಿ ಸಾಗರ ಜಲಾಶಯದ ನೀರಿನ ಮಟ್ಟ ದಶಕದ ನಂತರ 110.20 ಅಡಿ ತಲುಪಿದೆ.
112 ವರ್ಷ ಇತಿಹಾಸವಿರುವ ಈ ಜಲಾಶಯದ ನೀರಿನ ಮಟ್ಟ ಹತ್ತು ವರ್ಷದ ಬಳಿಕ ಗುರುವಾರ 110.20 ಅಡಿ ತಲುಪಿದೆ. ಕಳೆದ ಎರಡು ವರ್ಷಗಳ ಹಿಂದೆ ಬತ್ತಿ ಹೋಗಿ ಡೆಡ್ ಸ್ಟೋರೆಜ್ ತಲುಪಿದ್ದ ಡ್ಯಾಂ ಈಗ ತುಂಬಿ ತುಳುಕುತ್ತಿದೆ.
1911 ರಲ್ಲಿ ಪ್ರಥಮ ಬಾರಿಗೆ ನೀರಿನ ಮಟ್ಟ 109.66 ಅಡಿ ಮುಟ್ಟಿತ್ತು. 1933 ರಲ್ಲಿ 135.25 ಅಡಿ ದಾಖಲೆಯಲ್ಲಿ ನೀರು ಸಂಗ್ರಹವಾಗಿತ್ತು. 2000 ರಲ್ಲಿ 122.50 ಅಡಿ ನಂತರ 2010 ರಲ್ಲಿ 112.75 ಸಂಗ್ರಹವಾಗಿದ್ದು ಬಿಟ್ಟರೆ ಇದೀಗ ಹತ್ತು ವರ್ಷಗಳ ನಂತರದಲ್ಲಿ 110.20 ಅಡಿ ನೀರು ಹರಿದು ಬಂದಿದೆ. ಈ ತಿಂಗಳ 15 ರವರೆಗೆ ಜಲಾಶಯಕ್ಕೆ ನೀರು ಹರಿಯಲಿದ್ದು 10 ವರ್ಷಗಳ ಬಳಿಕ 112 ಅಡಿ ತಲುಪುವ ಸಾಧ್ಯತೆ ಇದೆ.
ಕಳೆದ ಮೂರು ತಿಂಗಳಿಂದ ಭದ್ರಾ ಜಲಾಶಯದಿಂದ ಹರಿಯುತ್ತಿರುವ ನೀರಿನಿಂದ ಡ್ಯಾಂ ನಲ್ಲಿ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಮಟ್ಟದ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸಿದೆ.
ನೀರಿನ ಬವಣೆ ನೀಗಿಸಲು ಭದ್ರಾ ಜಲಾಶಯದಿಂದ ಪ್ರತಿದಿನ ನೀರು 615 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ. ಅಜ್ಜಂಪುರ ಭಾಗದಲ್ಲಿ ಮಳೆಯಾಗಿದ್ದರಿಂದ ಬುಧವಾರ ಹಾಗೂ ಗುರುವಾರ 2878 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ.
ಇನ್ನು ಹೊಸದುರ್ಗ, ಹಿರಿಯೂರು ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್ವೆಲ್ ಕೊರೆಸಿದರು ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳಲ್ಲಿ, ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 100 ರಿಂದ 200 ಅಡಿಗೆ ನೀರು ಸಿಗುತ್ತಿದೆ.
ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ರಮ್ಯ ರಮಣೀಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಜಲಾಶಯ ತುಂಬು ಹಂತಕ್ಕೆ ಬಂದಿರೋದು, ರೈತ ಸಮುದಾಯದಲ್ಲಿ ಚೈತನ್ಯ ಮೂಡಿಸಿದೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ದಾಹ ನೀಗಿದಂತಾಗಿದೆ.
30 ಅಡಿ ಟಿಎಂಸಿ ನೀರು ನೀರಿನ ಸಾಮರ್ಥ್ಯದ ಜಲಾಶಯ ಪೂರ್ಣಮಟ್ಟ ತಲುಪಲು 19.20 ಅಡಿ ನೀರು ಬಾಕಿ ಇದ್ದು, ಈ ಬಾಕಿ ಇರುವ ನೀರು ಹರಿದು ಬಂದರೆ ಜಲಾಶಯ ತುಂಬುತ್ತದೆ. ಜಲಾಶಯದ ಲೈವ್ ಸ್ಟೋರೇಜ್ 13.99 ಇದೆ. 14 ಟಿಎಂಸಿ ನೀರು ಬಂದಲ್ಲಿ ಎರಡನೇ ಬಾರಿಗೆ ಕೋಡಿಯಲ್ಲಿ ನೀರು ಹರಿಯಬಹುದು.
58 ನೇ ಬಾರಿಗೆ ಜಲಾಶಯ ನೀರಿನ ಮಟ್ಟ 100 ಅಡಿ ದಾಟಿದೆ. ವಿಶ್ವೇಶ್ವರಯ್ಯ ನೀರಾವರಿ ಜಲ ನಿಗಮದವರು, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವರು ಗಟ್ಟಿ ನಿರ್ಧಾರ ಕೈಗೊಂಡು ಅಕ್ಟೋಬರ್ 15 ರವರೆಗೆ ಇರುವ ಭದ್ರಾ ಜಲಾಶಯದಿಂದ ನೀರನ್ನು ಹರಿಸುವ ಆದೇಶವನ್ನು ಜನವರಿ 2022 ರವರೆಗೆ ಮುಂದುವರಿಸಿದರೆ ಜಲಾಶಯದಲ್ಲಿ ನೀರು 120 ಅಡಿ ದಾಟುವ ಎಲ್ಲ ಲಕ್ಷಣಗಳಿವೆ.