ಮೈಸೂರು: ಶಾಸಕ ಸಾ.ರಾ ಮಹೇಶ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಆಗಾಗ ಮಾತಿನ ಯುದ್ಧಗಳು ನಡೆಯುತ್ತಾ ಇರುತ್ತವೆ. ಅದರಲ್ಲೂ ರೋಹಿಣಿ ಸಿಂಧೂರಿ ಮೈಸೂರಿನಲ್ಲಿಯೇ ಇದ್ದಾಗ ಸಿಕ್ಕಾಪಟ್ಟೆ ವಾದ – ವಿವಾದಗಳು ನಡೆಯುತ್ತಿದ್ದವು. ಇದೀಗ ಇಬ್ಬರ ನಡುವೆ ಸಂಧಾನ ಕಾರ್ಯ ಏರ್ಪಟ್ಟಿದೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಫೋಟೋಗಳು ಹರಿದಾಡುತ್ತಿವೆ.
ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ಹಾಗೂ ಐಎಎಸ್ ಅಧಿಕಾರಿ ಮಣಿವಣ್ಣನ್ ಮೂರು ಜನ ಕುಳಿತಿರುವ ಫೋಟೋ ಒಂದು ಓಡಾಡುತ್ತಿದೆ. ಇಬ್ಬರ ಸಮಸ್ಯೆಯನ್ನು ಬಗೆಹರಿಸಿ, ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾರಾ ಮಹೇಶ್ ಖಾಸಗಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಹೌದು ಎಂದು ಹೇಳಿದ್ದಾರೆ.
“ಹೌದು ನನ್ನ ಬಳಿ ಹಲವು ಅಧಿಕಾರಿಗಳ, ರಾಜಕಾರಣಿಗಳ ಜೊತೆಗೆ ಸಂಧಾನಕ್ಕೆ ಬಂದಿದ್ದರು. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷವಿಲ್ಲ. ನಾನು ಯಾರಿಗೂ ಕೂಡ ತೊಂದರೆ ಕೊಡುವುದಿಲ್ಲ. ಅವರು ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ನನ್ನ ಮೇಲೆ ಕೆಸರು ಎರಚಲು ಯತ್ನಿಸಿದ್ದನ್ನು ನಾನು ಕ್ಷಮಿಸಲಾರೆ. ಇನ್ಮುಂದೆ ಸಮರ ಸಾರುವುದಿಲ್ಲ. ನನ್ನ ಕರ್ತವ್ಯ ಮಾತ್ರ ಮಾಡುತ್ತೇನೆ. ನಾನು ಅನುಭವಿಸಿದ ನೋವನ್ನು ಬೇರೆಯವರು ಅನುಭವಿಸಬಾರದು” ಎಂದಿದ್ದಾರೆ.
ಇನ್ನು ಈ ಬಾರಿಯ ಸದನದಲ್ಲಿಯೂ ಶಾಸಕ ಸಾರಾ ಮಹೇಶ್ ಈ ವಿಚಾರದಲ್ಲಿ ಮಾತನಾಡಿದ್ದರು. ನಾನು ವೀಕ್ ಮೈಂಡೆಡ್ ಆಗಿದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಅಧಿಕಾರಿಗಳ ಆಶ್ರಯ ಇದೆ. ನಮಗೆಲ್ಲಾ ಆಶ್ರಯವಿಲ್ಲ. ನನ್ನನ್ನು ನಾನೇ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು.