ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಫೆ.18) : ಕಾಯಕ ಶರಣರ ಆದರ್ಶ ಪಾಲನೆ ಮಾಡಿದರೆ ಸಮಾಜ ಸರ್ವಾಂಗೀಣ ಪ್ರಗತಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಮತ್ತು ಉರಿಲಿಂಗ ಪೆದ್ದಿ ಮೊದಲಾದ ಕಾಯಕ ಶರಣರ ಜಯಂತಿ ಆಚರಣೆ ಸಮಾರಂಭದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕಾಯಕ ಶರಣರು ಎಂದು ಕರೆಯಿಸಿಕೊಳ್ಳುವ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡವರು.
ಕಾಯಕ ಶರಣರ ಆದರ್ಶಗಳ ಪಾಲನೆಯಿಂದ ಸಮ ಸಮಾಜ ನಿರ್ಮಾಣ ಆಗುವುದರ ಜೊತೆಗೆ ಜಾತಿ ವ್ಯವಸ್ಥೆಯೂ ತೊಲಗಲಿದೆ. ಯಾರು ಕೂಡ ಸೋಮಾರಿಯಾಗಿ ಕಾಲಕಳೆಯಬಾರದು. ಯಾವ ಕಾಯಕವೂ ದೊಡ್ಡದಲ್ಲ, ಮನಸ್ಸಿನಿಂದ ಮಾಡುವ ಯಾವ ಕಾಯಕವೂ ಸಣ್ಣದಲ್ಲ.ಯಾವುದಾದರೊಂದು ಕಾಯಕ ಮಾಡಬೇಕು ಎಂದು ಸಾರಿದ ಮಹಾನುಭಾವರು ಈ ಕಾಯಕ ಶರಣರು ಎಂದು ತಿಳಿಸಿದರು.
12ನೇ ಶತಮಾನದ ಮುಂಚಿನ ಸಮಾಜದಲ್ಲಿ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ, ಸ್ತ್ರೀ-ಪುರುಷ ಅಸಮಾನತೆ, ಮೂಢನಂಬಿಕೆ, ಅನಿಷ್ಟ ಪದ್ಧತಿ, ಅನಾಚಾರಗಳು ತಾಂಡವಾಡುತ್ತಿದ್ದವು. ಸಾಮಾನ್ಯ ಜನರಿಗೆ ಧರ್ಮ, ಮೋಕ್ಷ, ಆಧಾತ್ಮ ಕೈಗೆಟುಕುತ್ತಿರಲಿಲ್ಲ. ಇದನ್ನು ಮನಗಂಡು ವಚನ ಚಳುವಳಿಯ ವಚನಕಾರರು ತಿದ್ದಿದರು. ದಯವಿಲ್ಲದ ಧರ್ಮವಾವುದಯ್ಯ, ದಯವೇ ಧರ್ಮದ ಮೂಲವಯ್ಯ, ಕಳ್ಳತನ, ಮೋಸ, ಸುಳ್ಳು ಹೇಳಬೇಡ ಎಂದು ಧರ್ಮದ ವಿಚಾರವಾಗಿ ವಚನಕಾರರು ಧರ್ಮದ ತಿರುಳನ್ನು ಸಾಮಾನ್ಯ ಜನರಿಗೆ ಸರಳವಾಗಿ ತಿಳಿಸಿಕೊಟ್ಟರು ಎಂದರು.
ವಚನ ಚಳುವಳಿಯು ವ್ಯವಸ್ಥೆಯ ವಿರುದ್ಧ ಅಂದೋಲನವಾಗಿ ರೂಪಗೊಂಡಿತು. ರಾಜ ಪ್ರಭುತ್ವ, ಪುರೋಹಿತಶಾಹಿ ವ್ಯವಸ್ಥೆ, ಪುರುಷ ಪ್ರಧಾನ ವ್ಯವಸ್ಥೆ ದಿಕ್ಕರಿಸಿ, ಅವುಗಳಲ್ಲಿರುವ ಅಸಮಾನತೆ, ಶೋಷಣೆ, ಅನಾಚಾರಗಳನ್ನು ಬದಿಗೊತ್ತು, ಜನಸಾಮಾನ್ಯರಿಗೆ ಧರ್ಮ ತಿರುಳು ಹೇಳಿದವರು ಬಸವಣ್ಣನವರ ನೇತೃತ್ವದಲ್ಲಿ ಎಲ್ಲ ವಚನಕಾರರು ತಿಳಿಸಿಕೊಟ್ಟರು. ವಚನಕಾರರು ಮೊದಲ ಪ್ರಾಧಾನ್ಯತೆ ನೀಡಿದ್ದು, ಕಾಯಕ ತತ್ವಕ್ಕೆ. ತಾವುಗಳ ಮಾಡುವ ಕಾಯಕದಲ್ಲಿಯೇ ಭಗವಂತನನ್ನು ಕಂಡರು. ನಂತರ ಸಮಾಜ ಸುಧಾರಣೆಗೆ ಪ್ರಯತ್ನಿಸಿದರು ಎಂದು ಹೇಳಿದರು.
ವಚನಕಾರರು ಜಾತಿ ವ್ಯವಸ್ಥೆಯನ್ನು ಬೇರೆ ದೃಷ್ಠಿಯಿಂದ ನೋಡಿದರು. ಯಾರು ಸದಾಚಾರ ಸಂಪನ್ನರೂ, ಯಾರು ಶಿವಭಕ್ತರೂ ಅವರೇ ಕುಲಜರು. ಇದಕ್ಕೆ ವಿರುದ್ಧವಾಗಿ ಬದುಕುವವರು ಕುಲಹೀನರು. ಜಾತಿಯ ಹೊಸ ವ್ಯಾಖ್ಯಾನ ನೀಡಿದರು ಎಂದರು.
ಅಟ್ರಾಸಿಟಿ ಕಮಿಟಿ ಸದಸ್ಯ ಹಾಗೂ ದಲಿತ ಮುಖಂಡ ಬಿ.ರಾಜಪ್ಪ, ಮೂಲ ಪುರುಷರಾದ ಕಾಯಕ ಶರಣರ ವಿಚಾರಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾಯಕ ಶರಣರ ಆದರ್ಶ, ವಿಚಾರಧಾರೆಗಳನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಕಾಯಕ ಶರಣರ ಜಯಂತಿಯನ್ನು ಸಂಭ್ರಮ-ಸಡಗರದಿಂದ ಆಚರಣೆ ಮಾಡಲಾಗಿದೆ. ಅಸ್ಪøಶ್ಯ, ದಲಿತ ಜನಾಂಗದ ಶರಣರನ್ನು ಗುರುತಿಸಿ ಜಯಂತಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ ಅವರು, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಕಾಯಕ ಶರಣರ ಸಾಧನೆ, ವಿಚಾರಗಳನ್ನು ತಿಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ರಾಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಎಂ.ವೇದಾಂತ ಎಳಂಜಿ ಕಾಯಕ ಶರಣ ಕುರಿತು ಉಪನ್ಯಾಸ ನೀಡಿ, ವಚನಯುಗದಲ್ಲಿ ಕೆಳವರ್ಗದವರು ಬಹಳಮುಖ್ಯವಾಗಿದ್ದಾರೆ. ಕೆಳವರ್ಗದರನ್ನು ಬಿಟ್ಟು ವಚನಯುಗ ಅಧ್ಯಯನ ಮಾಡಲು ಸಾಧ್ಯವಿಲ್ಲ. ಆಮಟ್ಟಕ್ಕೆ ವಚನಯುಗಕ್ಕೆ ಆಧಾರಸ್ತಂಭವಾಗಿದ್ದಾರೆ ಎಂದು ಹೇಳಿದರು.
ಕಾಯಕ ಶರಣರು ಕಾಯಕದಿಂದಲೇ ಮುಕ್ತಿ. ಭಕ್ತಿಯಿಂದ ಮುಕ್ತಿ ಸಾಧ್ಯವಿಲ್ಲ ಎಂದು ಭಾವಿಸಿದವರು. ಕೆಳವರ್ಗದ ವಚನಕಾರರು ಕಾಯಕ ಜೀವಿಗಳ ಪರವಾಗಿ ನಿಲ್ಲುತ್ತಿದ್ದರು.
ಮಾದರ ಚೆನ್ನಯ್ಯ 10 ವಚನಗಳನ್ನು ರಚನೆ ಮಾಡಿದರು. ಇವರು ತಮಿಳುನಾಡಿನ ಕರಿಕಾಲ ರಾಜ ಚೋಳರ ಅಸ್ಥಾನದಲ್ಲಿದ್ದರು. ವೃತ್ತಿಗಳನ್ನು ಜಾತಿಗಳಾಗಿ ಮಾಡುವುದನ್ನು ಖಂಡಿಸಿದರು. ಉರಿಲಿಂಗ ಪೆದ್ದಿ ಅವರು, ಕರ್ನಾಟಕದ ಬಿಜಾಪುರದ ಮೂಲದವರು. ಇವರ ಮೂಲ ವೃತಿ ಕಳ್ಳತನವಾಗಿತ್ತು. ಪರಿವರ್ತನೆಗೊಂಡ ನಂತರ ಕಾಯಕದಿಂದ ವೃತ್ತಿಯನ್ನು ಆರಂಭಿಸಿ ದೊಡ್ಡ ವಚನಕಾರರಾಗಿ ಬೆಳೆಯುತ್ತಾರೆ. ಹಲವು ಕೆರೆಗಳನ್ನು ನಿರ್ಮಾಣ ಮಾಡುತ್ತಾನೆ. ಸಂಸ್ಕøತ ಭಾಷೆ ಕಲಿಯುವುದರಲ್ಲಿ ಆಸಕ್ತಿಹೊಂದಿ, ಸ್ವತಃ ತಾನೇ ಸಂಸ್ಕøತ ಭಾಷೆ ಕಲಿಯುತ್ತಾನೆ. ನಂತರ ಸವರ್ಣಿಯರ ಮಠಕ್ಕೆ ಪೀಠಾಧಿಪತಿಯಾಗುತ್ತಾನೆ. ಮಾದರ ಧೂಳಯ್ಯ ಅವರು 106 ವಚನಗಳನ್ನು ರಚನೆ ಮಾಡಿದರು. ಇವರ ವೃತ್ತಿ ಚಪ್ಪಲಿ ಹೊಲಿಯುವ ಕಾಯಕವಾಗಿತ್ತು.
ಕಾಯಕದಿಂದಲ್ಲೇ ಮುಕ್ತಿ ಕಂಡುಕೊಂಡರು. ಡೋಹರ ಕಕ್ಕಯ್ಯ ಅವರು 6 ವಚನಗಳನ್ನು ರಚಿಸಿದರು. ಬೆಳಗಾವಿ ಜಿಲ್ಲೆಯ ಕಕ್ಕರೆ ಎಂಬ ಗ್ರಾಮದಲ್ಲಿ ಜನಿಸಿದರು. ಬಸವಣ್ಣನವರ ಮೂಲಕ ಇಷ್ಟಲಿಂಗ ಪಡೆದರು ಎಂದರು.
ಜಯಂತಿ ಅಂಗವಾಗಿ ನಗರದ ಬಿ.ಡಿ.ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ನಂತರ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಒನಕೆ ಓಬವ್ವ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿತು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಡಿ.ಎನ್.ಮೈಲಾರಪ್ಪ, ಎಚ್.ಸಿ.ನಿರಂಜನಮೂರ್ತಿ, ಶ್ರೀ ಕಣಿವೆ ಮಾರಮ್ಮ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ. ದಲಿತ ಮುಖಂಡಾದ ಜಿ.ಎಂ.ಪ್ರಕಾಶ್, ತಿಪ್ಪೇಸ್ವಾಮಿ, ಶಿವಣ್ಣ, ನಿವೃತ್ತ ಡಿಡಿಪಿಐ ಎಂ.ಮಲ್ಲಣ್ಣ ಸೇರಿದಂತೆ ಮತ್ತಿತರರು ಇದ್ದರು. ಕೆ.ಗಂಗಾಧರ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.