ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾತ್ಮಕ ಘಟನೆಯ ಬಗ್ಗೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ನೇತಾರ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ರೈತರ ಮೇಲೆ ತೀವ್ರವಾದ ದಬ್ಬಾಳಿಕೆ ನಡೆಸುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ, ರೈತರ ಪರ ಧ್ವನಿ ಎತ್ತಿದ ಪ್ರಿಯಾಂಕಾ ಗಾಂಧಿ ಅವರನ್ನು ಸರ್ಕಾರ ಅಕ್ರಮವಾಗಿ ಬಂಧನದಲ್ಲಿ ಇರಿಸಿದೆ ಎಂದು ಕಿಡಿಕಾರಿದರು. ಇದೇ ವೇಳೆ ರೈತರ ಮೇಲೆ ಕಾರು ಹಾಯಿಸಿದ ಸಚಿವರ ಪುತ್ರನನ್ನು ಇದುವರೆಗೂ ಬಂಧಿಸದಿರುವುದು ಕಾನೂನಿಗೆ ಮಾಡುತ್ತಿರುವ ಅಪಹಾಸ್ಯ ಎಂದು ಖರ್ಗೆ ಹರಿಹಾಯ್ದರು.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿದ ರೈತರು ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಆಲಿಸುವ ಬದಲು ವಾಮಮಾರ್ಗದಲ್ಲಿ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಿಯಾಂಕಾ ಅವರ ಬಂಧನ ಅಕ್ರಮ ಎಂದು ಖುದ್ದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ. ಪ್ರಿಯಾಂಕಾ ಬಂಧನ ಪ್ರಕ್ರಿಯೆಯನ್ನು ಇಡೀ ದೇಶ ಪ್ರಶ್ನಿಸುತ್ತಿದೆ. ಆದರೆ ಸರ್ವಾಧಿಕಾರಿ ಮನೋಭಾವದ ಬಿಜೆಪಿ ಸರ್ಕಾರ ದೇಶದ ಜನರ ಕೂಗನ್ನು ಆಲಿಸುತ್ತಿಲ್ಲ ಎಂದು ಖರ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ರೈತ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. ರೈತರ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶ ನೀಡದ ಬಿಜೆಪಿ ಸರ್ಕಾರವೇ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು.