ಸುದ್ದಿಒನ್, ಚಿತ್ರದುರ್ಗ, (ಅ.06) : ಆರ್‌ಎಸ್‌ಎಸ್ ತರಬೇತಿ ಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ ತಿಳಿಸಿದ್ದಾರೆ.
ಐಎಎಸ್ ಮತ್ತು ಐಪಿಎಸ್‌ಗಳಿಗೆ ಆರ್‌ಎಸ್‌ಎಸ್ ತರಬೇತಿ ನೀಡುತ್ತದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರಿಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲ. ನಮ್ಮಲ್ಲಿ ಹಿರಿಯರಿಗೆ ತರಬೇತಿ ನೀಡುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯಲ್ಲಿ ಸಂಘದ ತರಬೇತಿ ಪ್ರಾಥಮಿಕ ಸಂಘ ಶಿಕ್ಷಾ ವರ್ಗಕ್ಕೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗುವುದೆಂದು ತಿಳಿಸಿದ್ದಾರೆ.
ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು ರಾಷ್ಟ್ರದ ಹಿತಾಸಕ್ತಿಗೋಸ್ಕರ ಕೆಲಸ ಮಾಡುವಂತಹ ನಿಟ್ಟಿನಲ್ಲಿ ಸಂಘದ ಅನೇಕ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಸ್ವಯಂಸೇವಕರಾಗಿರುವವರು ಯಾರು ಕೂಡ ತಾಲಿಬಾನಿಗಳಾಗಿ ಅಥವಾ ಪಾಕಿಸ್ತಾನದ ಐಎಸ್ಐ ಉಗ್ರಗಾಮಿಗಳಾಗಿಲ್ಲವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್ ಶಾಖೆಗಳಲ್ಲಿ ದೇಶಭಕ್ತಿ ಕಲಿಸುವ ಸಂಸ್ಕಾರ ನೀಡುತ್ತಿದೆ. ಹಿಂದೂ ಧರ್ಮದ ಬಗ್ಗೆ ಗುರು ಹಿರಿಯರ ಬಗ್ಗೆ ಸಂಸ್ಕಾರವನ್ನು ಆರ್ ಎಸ್ ಎಸ್ ಕಲಿಸುತ್ತಿದೆ ಸಂಘದ ಶಾಖೆಗೆ ಬಂದಿರುವ ಅನೇಕರು ಐಎಎಸ್ ಐಪಿಎಸ್ ಕೆಎಎಸ್ ಅಧಿಕಾರಿಗಳಾಗಿದ್ದಾರೆ. ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವ ಮೂಲಕ ಪದೇ ಪದೇ ಕುಮಾರಸ್ವಾಮಿ ಹಿಟ್ ಅಂಡ್ ರನ್ ತರಹ ಆಗಿದ್ದಾರೆ. ಇದೇ ರೀತಿಯಲ್ಲಿ ಮಾತನಾಡಿದ ಆಂಧ್ರಪ್ರದೇಶದ ಚಂದ್ರಬಾಬುನಾಯ್ಡು ಇಂದು ಯಾವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂಬುದನ್ನು ಅವರು ಅರಿಯಬೇಕು.
ಆರ್‌ಎಸ್‌ಎಸ್ ಸಮಾಜಘಾತಕವಲ್ಲ, ರಾಷ್ಟç ಭಕ್ತರನ್ನು ನಿರ್ಮಾಣ ಮಾಡುವಂತಹ ಸಂಸ್ಕಾರಯುತ ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತಿದೆ. ಸಂಘದ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ. ಎಚ್. ಡಿ. ಕುಮಾರಸ್ವಾಮಿ ಅವರು ಹೀಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು.
ಆರ್‌ಎಸ್‌ಎಸ್ ಸ್ವಯಂಸೇವಕರು ದೇಶ ಆಳುತ್ತಿದ್ದಾರೆ ಇದರಲ್ಲಿ ತಪ್ಪೇನಿದೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಗೃಹ ಮಂತ್ರಿ, ರಕ್ಷಣಾ ಸಚಿವರು ಸೇರಿದಂತೆ ಶೇಕಡ ೯೯ ರಷ್ಟು ಕೇಂದ್ರದ ಮಂತ್ರಿಗಳು ಸ್ವಯಂಸೇವಕರು, ಉತ್ತರ ಪ್ರದೇಶ, ಹರಿಯಾಣ, ಗೋವಾ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು ಗೌರ್ನರ್‌ಗಳು ಆರ್‌ಎಸ್‌ಎಸ್ ಸ್ವಯಂ ಸೇವಕರು. ಇದು ಹೆಮ್ಮೆಯಿಂದ ಹೇಳಲು ಖುಷಿಪಡುತ್ತೇನೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದವರು ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ನೀಡಲಿ ಅದನ್ನು ಸ್ವಾಗತಿಸುತ್ತೇವೆ ಅದು ಬಿಟ್ಟು ಈ ರೀತಿ ಕ್ಷುಲ್ಲಕ ಹೇಳಿಕೆಯ ಪ್ರದರ್ಶನ ಮಾಡುವುದನ್ನು ಅವರು ಬಿಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.