ನವದೆಹಲಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಿಡುವಂತೆಯೇ ಕಾಣುತ್ತಿಲ್ಲ. ಸಿಡಿ ಕೇಸನ್ನೇ ಹಿಡಿದುಕೊಂಡು ಈಗ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ಸಿಡಿ ಕೇಸನ್ನು ಸಿಬಿಐಗೆ ಒಪ್ಪಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕೆಂದೇ ಈಗಾಗಲೇ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಸಿಡಿ ಕೇಸ್ ಬಗ್ಗೆ ಮಾತು ಕತೆ ನಡೆಸಿದ್ದಾರೆ. ಇನ್ನು ನಾಳೆ ಸಿಎಂ ಬೊಮ್ಮಾಯಿ ಅವರು ಕೂಡ ದೆಹಲಿಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಸಿಎಂ ಮೂಲಕ ಮತ್ತಷ್ಟು ಒತ್ತಡ ಹೇರಲು ನಿರ್ಧರಿಸಿದ್ದಾರೆ.
ಸಿಡಿ ಕೇಸನ್ನು ಸಿಬಿಐಗೆ ವಹಿಸಬೇಕೆಂದು ಸಿಎಂ ಬೊಮ್ಮಾಯಿ ಅವರ ಹಿಂದೆ ಮುಂದೆ ಓಡಾಡುತ್ತಾ ಇದ್ರು. ಇತ್ತ ದೆಹಲಿಗೆ ಬಂದು ಅಮಿತ್ ಶಾ ಅವರನ್ನು ಹಲವು ಸಲ ಭೇಟಿಯಾಗಿದ್ದಾರೆ. ಈ ಸಂಬಂಧ ಈ ಕೇಸನ್ನು ಮರು ತನಿಖೆ ನಡೆಸುವುದರಿಂದ ಡಿಕೆ ಶಿವಕುಮಾರ್ ಗೆ ಎಷ್ಟರಮಟ್ಟಿಗೆ ಸಮಸ್ಯೆ ಆಗುತ್ತೆ, ಯಾವೆಲ್ಲಾ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುವಂತಾಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ರಮೇಶ್ ಜಾರಕಿಹೊಳಿ ಈಗಾಗಲೇ ಅಮಿತ್ ಶಾ ಅವರಿಗೆ ನೀಡಿದ್ದಾರೆ.
ಹೀಗಾಗಿ ಚುನಾವಣೆ ಇರುವ ಕಾರಣ ಕಾಂಗ್ರೆಸ್ ಮಣಿಸಲು ಸರ್ಕಸ್ ಮಾಡುತ್ತಿರುವ ಬಿಜೆಪಿ ಇನ್ನು ಸ್ವಲ್ಪ ದಿನ ಸಮಯಾವಕಾಶ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಬಹುದೇನೋ ಎನ್ನಲಾಗುತ್ತಿದೆ. ಚುನಾವಣೆಯ ಬಿಸಿ ಕೂಡ ಜೋರಾಗಿ ಇರುವ ಕಾರಣ ಸಿಡಿ ಕೇಸ್ ಮತ್ತಷ್ಟು ತೀವ್ರತೆ ಪಡೆಯಬಹುದು.