ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಕಾರಣ ಅದೆಷ್ಟೋ ಕಷ್ಟಪಟ್ಟ ಅಭ್ಯರ್ಥಿಗಳಿಗೂ ಅನ್ಯಾಯವಾಯಿತು. ನ್ಯಾಯಕ್ಕಾಗಿ ಸಾಕಷ್ಟು ಓಡಾಡಿದರು ಅಬ್ಯರ್ಥಿಗಳಿಗೆ ಯಾವುದೇ ರೀತಿಯೆ ಪ್ರಯೋಜನವಾಗಲಿಲ್ಲ. ಸರ್ಕಾರ ಮರುಪರೀಕ್ಷೆಗೆ ಆದೇಶ ಹೊರಡಿಸಿತು. ಆದ್ರೆ ಈ ಮರು ಪರೀಕ್ಷೆ ಯಾವಾಗ ಎಂದು ಅಭ್ಯರ್ಥಿಗಳು ಕೂಡ ಕಾಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಪಿ ಪ್ರವೀಣ್ ಸೂದ್ ಮಹತ್ವದ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಯಾವಾಗ ಎಂದು ಕಾಯುತ್ತಿದ್ದವರಿಗೆ ವಿಚಾರ ತಿಳಿಸಿದ್ದಾರೆ. 545 ಪಿಎಸ್ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಾವೂ ತಯಾರಿದ್ದೇವೆ. ಆದರೆ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಪರೀಕ್ಷೆ ನಡೆಸದಂತೆ ನ್ಯಾಯಾಲಯ ನಮಗೆ ಆದೇಶ ನೀಡಿದೆ. ನ್ಯಾಯಾಲಯದ ತೀರ್ಪಿಗೆ ನಾವೂ ಬದ್ಧ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪರೀಕ್ಷೆಗೆ ಅಂತ ಶ್ರಮವಹಿಸಿ, ಕಷ್ಟಪಟ್ಟು, ಕೋಚಿಂಗ್ ತೆಗೆದುಕೊಂಡು ಓದಿದ್ದ ಎಷ್ಟೋ ಅಭ್ಯರ್ಥಿಗಳಿಗೆ ಇದು ಹೊಡೆತ ನೀಡಿದೆ. ಮತ್ತೆ ಪರೀಕ್ಷೆ ಆದಷ್ಟು ಬೇಗ ಅನೌನ್ಸ್ ಮಾಡಿದರೆ ಓದಿರುವುದು ಅನುಕೂಲವಾಗುತ್ತೆ ಎಂಬುದು ಅಭ್ಯರ್ಥಿಗಳ ಆಸೆ. ಆದರೆ ಚುನಾವಣೆ ಬೇರೆ ಹತ್ತಿರವಿರುವ ಕಾರಣ ಹೊಸ ಸರ್ಕಾರ ರಚನೆಯಾಗುವ ತನಕ ಕಷ್ಟಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.