ಚಿತ್ರದುರ್ಗ : ಮಕ್ಕಳಿಗೆ ಶಿಕ್ಷಣದ ಜೊತೆ ಪರಿಸರ ಕಾಳಜಿ ಮೂಡಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ಜಿ.ಕೆ. ಎಜುಕೇಷನ್ ಅಂಡ್ ರೂರಲ್ ಅರ್ಬನ್ ಡೆವಲಪ್‍ಮೆಂಟ್ ಸೊಸೈಟಿ(ರಿ) ಚಿತ್ರದುರ್ಗ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಇವುಗಳ ಸಹಯೋಗದೊಂದಿಗೆ ಸೊಂಡೆಕೆರೆಯಲ್ಲಿರುವ ನಳಂದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪರಿಸರ ಕಾಪಾಡಿ ಜಾಗೃತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಶಿಕ್ಷಣ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಹಣ ಸಂಪಾದಿಸುವುದಷ್ಟೆ ಜೀವನವಲ್ಲ. ಒಳ್ಳೆ ಪರಿಸರ ಪ್ರೇಮಿಯಾಗುವುದಾಗಿ ಸಂಕಲ್ಪ ಮಾಡಿ ಎಂದು ಮಕ್ಕಳಿಗೆ ಸಲಹೆ ನೀಡಿದ ಸ್ವಾಮೀಜಿ ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಹಿಂದಿನ ಕಾಲದಲ್ಲಿ ಸೇವಿಸುವ ಆಹಾರ, ನೀರು, ಗಾಳಿ ಶುದ್ದವಾಗಿತ್ತು. ಈಗ ಎಲ್ಲವೂ ಕಲುಷಿತಗೊಂಡಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಆದರ್ಶ ಗುರಿಯಲ್ಲದ ಮನುಷ್ಯನ ಜೀವನ ವ್ಯರ್ಥ. ಹಾಗಾಗಿ ಚಿಕ್ಕಂದಿನಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು.
ಜಿ.ಕೆ. ಎಜುಕೇಷನ್ ಅಂಡ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಅಧ್ಯಕ್ಷೆ ಮಂಜುಳಾ ಮಾತನಾಡಿ ಪ್ಲಾಸ್ಟಿಕ್ ಅಪಾಯಕಾರಿ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಅನಿವಾರ್ಯವಾಗಿ ಪ್ಲಾಸ್ಟಿಕ್‍ಗೆ ಅಂಟಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ಸುಟ್ಟಾಗ ಅದರಿಂದ ಹೊರಸೂಸುವ ವಿಷಕಾರಿ ಅನಿಲ ಸಕಲ ಜೀವರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಣ್ಣಿನಲ್ಲಿ ಪ್ಲಾಸ್ಟಿಕ್ ಕೊಳೆಯುವುದಿಲ್ಲ. ದಿನನಿತ್ಯವೂ ಪ್ಲಾಸ್ಟಿಕ್ ಬಳಸಿ ಹೊರಗೆ ಎಸೆಯುವುದನ್ನು ಜಾನುವಾರುಗಳು ಸೇಷಿಸಿ ಸಾವನ್ನಪ್ಪಿರುವುದುಂಟು. ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಾಣಕ್ಕಾಗಿ ಸರ್ಕಾರದೊಡನೆ ಎಲ್ಲರೂ ಕೈಜೋಡಿಸೋಣ ಎಂದು ಮಕ್ಕಳಿಗೆ ಕರೆ ನೀಡಿದರು.
ಗಂಗಾಧರೇಶ್ವರಸ್ವಾಮಿ ಮಾತನಾಡುತ್ತ ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ವಿಜ್ಞಾನ ಎಲ್ಲಾ ಕಂಡು ಹಿಡಿದಿದೆ. ಹಿಂದಿನ ಕಾಲದಲ್ಲಿ ಕಂಚು, ಹಿತ್ತಾಳೆ, ತಾಮ್ರ, ಮಡಿಕೆ, ಸ್ಟೀಲ್ ಬಳಸಲಾಗುತ್ತಿತ್ತು. ಕೊನೆಗೆ ಈಗ ಪ್ಲಾಸ್ಟಿಕ್‍ವರೆಗೆ ಬಂದು ನಿಂತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಕೇವಲ ಸರ್ಕಾರದ ಕೆಲಸ ಎಂದು ತಿಳಿದು ಸುಮ್ಮನೆ ಕೂರುವುದು ಸರಿಯಲ್ಲ. ಎಲ್ಲರ ಹೊಣೆ ಮುಖ್ಯ ಎಂದು ಹೇಳಿದರು.
ನಳಂದ ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ ವೇಣುಗೋಪಾಲ್ ಪಿ. ಮಾತನಾಡಿ ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ಎನ್ನುವ ಹಂತಕ್ಕೆ ಎಲ್ಲರೂ ತಲುಪಿದ್ದಾರೆ. ಅಷ್ಟೊಂದು ವೇಗವಾಗಿ ಪ್ಲಾಸ್ಟಿಕ್ ಮಾನವನ ಜೀವನದಲ್ಲಿ ಆವರಿಸಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯದ ಕಾರಣ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಪ್ಲಾಸ್ಟಿಕ್‍ನಿಂದಾಗುವ ಅನಾಹುತ ಬಗ್ಗೆ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದರು.
ಸಮಾಜ ಸೇವಕ ಡಿ. ಸೋಮಶೇಖರ್ ಮಾತನಾಡುತ್ತ ಪ್ಲಾಸ್ಟಿಕ್ ಮುಕ್ತ ದೇಶ ನಿರ್ಮಾಣಕ್ಕೆ ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಬೇಕು. ಪ್ಲಾಸ್ಟಿಕ್ ಮನೆಗಳಲ್ಲಿ ಬಳಸದಂತೆ ಮಕ್ಕಳಿಗೆ ತಿಳಿಸಿದಾಗ ಅದು ಎಲ್ಲರಿಗೂ ತಲುಪಲಿದೆ. ಶಾಲೆಯ ಆವರಣದಲ್ಲಿ ಒಬ್ಬೊಬ್ಬರು ಐದೈದು ಗಿಡಗಳನ್ನು ನೆಟ್ಟರೆ ಇಡಿ ಶಾಲೆಯ ವಾತಾವರಣವೇ ಹಸಿರಿನಿಂದ ಕಂಗೊಳಿಸುತ್ತದೆ ಎಂದು ತಿಳಿಸಿದರು.
ಜಿ.ಕೆ. ಎಜುಕೇಷನ್ ಅಂಡ್ ರೂರಲ್ ಅರ್ಬನ್ ಡೆವಲಪ್‍ಮೆಂಟ್ ಸೊಸೈಟಿ ಸಂಸ್ಥಾಪಕ ಕಾರ್ಯದರ್ಶಿ ಗೋಪಾಲ, ಕೆ.ಎನ್. ಮೂರ್ತಿನಾಯ್ಕ, ನಳಂದ ಗ್ರಾಮಾಂತರ ಪ್ರೌಢಶಾಲೆ ಕಾರ್ಯದರ್ಶಿ ಶ್ರೀಮತಿ ತಿಮ್ಮಕ್ಕ, ಶಿಕ್ಷಕರುಗಳಾದ ಶಿವಯೋಗಿ, ಬಸವರಾಜ್, ಶಿವಣ್ಣ, ಶ್ರೀಕಂಠೇಶ, ಸಕ್ರಪ್ಪ ವೇದಿಕೆಯಲ್ಲಿದ್ದರು.