ಮೈಸೂರು: 2023ರ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟ ಮಾಡಿದೆ. ಈ ಬಾರಿ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೂ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಇಂದು ಶಾಸಕ ರಾಮದಾಸ್ ಅವರು, ಎಸ್ ಎಲ್ ಭೈರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಸನ್ಮಾನಿಸಲಾಗಿದೆ.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಎಸ್ ಎಲ್ ಭೈರಪ್ಪ ಅವರು, ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ಈ ಸಂಸ್ಕೃತಿ ಏಕ ರೂಪದಲ್ಲಿ ಬೆಳೆದಿದೆ. ಗಣರಾಜ್ಯ ಮೊದಲಿಂದಲೂ ಇತ್ತು. ಸಂವಿಧಾನದ ಬಹುಭಾಗ ನಮ್ಮಲ್ಲಿ ಮೊದಲಿಂದಲೂ ಇತ್ತು. ಗಣರಾಜ್ಯದ ಉತ್ಸವ ಬಹಳ ಮಹತ್ವವಾದದ್ದು. ಇಲ್ಲೆ ಕೂತಿದ್ದೇನೆ, ಇಲ್ಲೆ ಬರೆದಿದ್ದೇನೆ ಎಂದರು.
ಎಷ್ಟೋ ದೇಶದಲ್ಲಿ ಸ್ವಾತಂತ್ರ್ಯ ಪಡೆದಿದ್ದಾರೆ. ಆದರೆ ಅಲ್ಲಿ ಸ್ವಾತಂತ್ರ್ಯ ಉಳಿದಿಲ್ಲ. ನಮ್ಮಲ್ಲಿ ಸಂವಿಧಾನ ಇದೆ. ಈ ದೇಶವನ್ನು ಕಾಪಾಡುತ್ತದೆ. ಲೇಖಕ ಸತ್ತೆ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೆಯೋ ಅಲ್ಲಿಯವರೆಗೂ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ. ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂದಿದ್ದಾರೆ.