ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,ಜ. 19 : ಮನಸ್ಸನ್ನು ಕಲಿಕೆಯೆಡೆಗೆ ಸೆಳೆಯುವ ವಿಭಿನ್ನವಾದ ಕಾರ್ಯಕ್ರಮ ಕಲಿಕಾ ಹಬ್ಬ ಕಾರ್ಯಕ್ರಮವಾಗಿದ್ದು, ಖುಷಿಯಿಂದ ಹಬ್ಬದ ವಾತಾವರಣ ಮೂಲಕ ಕಲಿಕೆಯಲ್ಲಿ ತೊಡಗಿ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ ನಗರದ ಸರ್ಕಾರಿ ಪ್ರೌಢಶಾಲೆ (ಕೋಟೆ)ಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಚಿತ್ರದುರ್ಗ ದಕ್ಷಿಣ ಕ್ಲಸ್ಟರ್ ವಿಭಾಗದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಕಲಿಯಬೇಕು ಎಂಬ ಹಿನ್ನಲೆಯಿಂದ ಸರ್ಕಾರ ಚಿಂತನೆ ಮಾಡಿದ್ದು, ಈ ಚಿಂತನೆ, ಸಲಹೆ ಹಾಗೂ ಮಾರ್ಗದರ್ಶನದಡಿಯಲ್ಲಿ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಕಲಿಕಾ ಹಬ್ಬದ ವಾತಾವರಣವನ್ನು ತುಂಬಾ ಉತ್ಸಾಹ, ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಕಲಿಕಾ ಹಬ್ಬದಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತಮ ಭವಿಷ್ಯ ನಿರ್ಮಾಣ ಮಾಡಬೇಕಾಗಿದೆ. ಸಮಯ ವ್ಯರ್ಥ ಮಾಡದೇ ಎಲ್ಲ ಮಕ್ಕಳು ಎರಡು ದಿನಗಳ ಕಾಲ ಚಟುವಟಿಕೆಗಳಲ್ಲಿ ಪೂರ್ಣವಾಗಿ ಭಾಗವಹಿಸಿ ಎಂದು ಹೇಳಿದರು.
ಬಿಆರ್‍ಸಿ ಸಂಪತ್ ಕುಮಾರ್ ಮಾತನಾಡಿ, ಕಲಿಕಾ ಹಬ್ಬ ಮಕ್ಕಳ ಮನಸ್ಸನ್ನು ಯಾವಾಗಲೂ ಅರಳುವ ಹಾಗೇ ಇಟ್ಟುಕೊಂಡು ಕಲಿಸುವ ಕೆಲಸವಾಗಿದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದ್ದು, ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳನ್ನು ಕಲಿಯಬೇಕು. ಆಟ ಆಡುವ ಮೂಲಕ ಪಾಠ ಕಲಿಯುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಹುಲಿಕುಂಟರಾಯಪ್ಪ, ಸರ್ಕಾರಿ ಕೋಟೆ ಪ್ರೌಢಾಶಾಲೆ ಮುಖ್ಯ ಶಿಕ್ಷಕಿ ಸೌಮ್ಯ, ಎಸ್‍ಡಿಎಂಸಿ ಅಧ್ಯಕ್ಷೆ ಪವಿತ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಶ್ವೇತಾ ಸೇರಿದಂತೆ ಚಿತ್ರದುರ್ಗ ದಕ್ಷಿಣ ಕ್ಲಸ್ಟರ್ ವಿಭಾಗದ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.