ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಜ.19):
ಮಹಾಯೋಗಿ ವೇಮನ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಅವರ ವಚನಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಪರಿವರ್ತನೆ ಅವಶ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಮಹಾಯೋಗಿ ವೇಮನ ಜಯಂತಿ” ಆಚರಣೆ ಸಮಾರಂಭದಲ್ಲಿ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
15ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಅಂದಿನ ಅಂಕು-ಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರಲು ಯತ್ನಿಸಿದ ಮಹಾಯೋಗಿ ವೇಮನರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಕರ್ನಾಟಕದ ಸರ್ವಜ್ಞ, ತಮಿಳಿನ ತಿರುವಳ್ಳವರ್ ರೀತಿಯಲ್ಲಿ ಆಂದ್ರಪ್ರದೇಶದ ತೆಲಗು ಭಾಷೆಯಲ್ಲಿ ಲೋಕಾನುಭವನ್ನು ಸೇರಿಸಿ ಜನರ ತಪ್ಪುಗಳನ್ನು ತಿಳಿಸಿ ಸರಿದಾರಿಗೆ ತರಲು ಯತ್ನಿಸಿದರು ಎಂದರು.
ವೇಮನರ ಪೂರ್ವದ ಜೀವನ ವಿಷಯಲೋಲಪತೆಯಿಂದ ಕೂಡಿತ್ತು. ನಂತರ ಅವರು ಯೋಗಿಗಳಾಗಿ ಪರಿವರ್ತನೆಯಾಗಿರುವುದನ್ನು ಇತಿಹಾಸದಿಂದ ನಾವು ತಿಳಿದಿದ್ದೇವೆ. ಒಬ್ಬ ವ್ಯಕ್ತಿಯ ಹುಟ್ಟಿನ ಮೂಲದಿಂದ ವ್ಯಕ್ತಿತ್ವ ಗುರುತಿಸಲು ಸಾಧ್ಯವಿಲ್ಲ. ಅನುಭವ, ಮನಸ್ಸು ಪರಿವರ್ತನೆ, ವೈರಾಗ್ಯಗಳು ಅವರನ್ನು ಮಾತ್ರವಲ್ಲದೇ ಇಡೀ ಸಮಾಜವನ್ನು ದಿಕ್ಕನ್ನು ಬದಲಿಸುವ ಶಕ್ತಿ ಮಹನೀಯರ ವಿಚಾರ ಹಾಗೂ ತತ್ವಾದರ್ಶಗಳಲ್ಲಿವೆ ಎಂದು ಅಭಿಪ್ರಾಯಪಟ್ಟರು.
ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಮಾತನಾಡಿ, ಮಹಾಕವಿ ಹಾಗೂ ಮಹಾಯೋಗಿ ಎಂದು ವೇಮನರನ್ನು ಕರೆಯುತ್ತೇವೆ. ರಾಜ ಕುಟುಂಬಕ್ಕೆ ಸೇರಿದ ವೇಮನ ಅವರು ವೈಭೋಗವನ್ನೇ ತ್ಯಾಗ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಸ್ಪಶ್ಯತೆ, ಜಾತಿಪದ್ಧತಿ, ಅಸಮಾನತೆ ವಿರೋಧ ಹೋರಾಟದಲ್ಲಿ ಶ್ರೇಷ್ಟ ದಾರ್ಶನಿಕರಾಗಿ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.
ವೇಮನ ಮಹಾಯೋಗಿಯಾಗಿ ಪರಿವರ್ತನೆಯಾಗಲು ಅವರ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಕಾರಣಿಭೂತರಾಗಿದ್ದಾರೆ. ಸರ್ವಜ್ಞರ ತ್ರಿಪದಿಗಳಂತೆಯೇ ತೆಲುಗಿನಲ್ಲಿ ವೇಮನರು ತ್ರಿಪದಿಗಳ ಮೂಲಕ ಸಮಾಜವನ್ನು ತಿದ್ದುವಂತಹ, ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡಿದ್ದಾರೆ ಎಂದರು.
ವೇಮನರು ತಂದೆ-ತಾಯಿ, ಸ್ನೇಹಿತರು, ವಿದ್ಯೆಯ ಬಗ್ಗೆ ಸಾಕಷ್ಟು ಪದ್ಯಗಳನ್ನು ರಚನೆ ಮಾಡಿದ್ದಾರೆ. ಪಾಶ್ಚಾತ್ಯ ವಿದ್ವಾಂಸ ಸಿ.ಪಿ.ಬ್ರೌನ್ ಅವರು ವೇಮನ ಪದ್ಯಗಳು ಹಾಗೂ ಸಾಹಿತ್ಯ ಕ್ರೂಢೀಕರಿಸುತ್ತಾರೆ. 15-16ನೇ ಶತಮಾನದಲ್ಲಿ ವೇಮನ ಬದುಕಿ ಬಾಳಿದ್ದಾರೆ. ಸರ್ವಜ್ಞ, ತಿರುವಳ್ಳರ್ ಹಾಗೂ ವೇಮನ ಅವರು ಒಂದೇ ರೀತಿಯಾಗಿ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ರೆಡ್ಡಿ ಸಮುದಾಯದ ಮುಖಂಡರಾದ ರಾಮಕೃಷ್ಣ ರೆಡ್ಡಿ, ಅಶ್ವತ್ಥ್ ರೆಡ್ಡಿ, ವಿಜಯಕುಮಾರ್, ವೆಂಕಟೇಶ್ ರೆಡ್ಡಿ, ತಿಪ್ಪೇಸ್ವಾಮಿ ರೆಡ್ಡಿ, ವೆಂಕಟೇಶ್ ರೆಡ್ಡಿ, ಡಾ.ಜಗದೀಶ್, ಎಸ್.ಆರ್.ಪತ್ತಾರ್ ಸೇರಿದಂತೆ ಮತ್ತಿತರರು ಇದ್ದರು.