ಸುದ್ದಿಒನ್, ಚಿತ್ರದುರ್ಗ, (ಅ.04) : ಉತ್ತರ ಪ್ರದೇಶದ ಲಖಂಪುರ್ ಖೇರಿಯಲ್ಲಿ ರೈತರ ಕ್ರೂರ ಹತ್ಯೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಯುಕ್ತ ರೈತ ಹೋರಾಟ ಸಂಘಟನೆ ಸೋಮವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ “ತೇನಿ”ಯನ್ನು ತಕ್ಷಣವೇ ಅವರ ಸ್ಥಾನದಿಂದ ವಜಾಗೊಳಿಸಬೇಕು. ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಕೋಮು ದ್ವೇಷವನ್ನು ಹರಡಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾ “ಮೋನು” ಮತ್ತು ಆತನ ಸಹವರ್ತಿ ಗೂಂಡಾಗಳನ್ನು ತಕ್ಷಣವೇ ಐಪಿಸಿ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದ ಲಖಿಂಪರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಹಾಡು ಹಗಲೇ ವಾಹನ ಚಲಾಯಿಸಿ 8 ಮಂದಿ ರೈತರನ್ನು ಕ್ರೂರವಾಗಿ ಹತ್ಯೆ ಮಾಡಿದ ಘಟನೆಯಿಂದ ಇಡೀ ದೇಶವೇ ಆಕ್ರೋಶಗೊಂಡಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆಯ ರಾಜ್ಯ ಸಚಿವರಾದ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಮತ್ತು ಆತನ ಗೂಂಡಾ ಸಹಚರರು ಈ ಕೊಲೆಗಡುಕ ದಾಳಿಯನ್ನು ನಿರ್ಭೀತ ರೀತಿಯಲ್ಲಿ ನಡೆಸಿದ್ದು ಇದು ರೈತರ ವಿರುದ್ಧ ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರಗಳ ಕ್ರೂರವಾದ ಪಿತೂರಿಯನ್ನು ತೋರಿಸುತ್ತದೆ. ಅಜಯ್ ಮಿಶ್ರಾ ಈಗಾಗಲೇ ರೈತರ ವಿರುದ್ಧ ಉದ್ಧಟತನದ ಮತ್ತು ಅವಹೇಳನಕಾರಿ ಭಾಷಣ ಮಾಡುವ ಮೂಲಕ ಈ ದಾಳಿಗೆ ಒಂದು ಸಂದರ್ಭವನ್ನು ನಿರ್ಮಿಸಿದ್ದರು. ಅದೇ ದಿನ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರೈತರ ಮೇಲೆ ಲಾಠಿ ಪ್ರಹಾರ ಮಾಡಲು ಮತ್ತು ದೌರ್ಜನ್ಯ ನಡೆಸಲು ತಮ್ಮ ಪಕ್ಷದ ಕಾರ್ಯಕರ್ತರನ್ನು ಸಾರ್ವಜನಿಕವಾಗಿ ಪ್ರಚೋದಿಸುತ್ತಿರುವುದು ಕಾಕತಾಳೀಯವಲ್ಲ.
ಸಾಂವಿಧಾನಿಕ ಹುದ್ದೆಗಳಲ್ಲಿ ಕುಳಿತಿರುವ ಈ ವ್ಯಕ್ತಿಗಳು ಶಾಂತಿಯುತ ಆಂದೋಲನವನ್ನು ಮಾಡುವ ಅನ್ನದಾತರ ವಿರುದ್ಧ ಯೋಜಿತ ಹಿಂಸೆಗೆ ತಮ್ಮ ಸ್ಥಾನಗಳನ್ನು ಬಳಸುತ್ತಿದ್ದಾರೆ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗಿದೆ. ಇದು ದೇಶದ ಕಾನೂನುಗಳ ಪ್ರಕಾರ, ಸಂವಿಧಾನ ವಿರೋಧಿ ಮತ್ತು ದೇಶ ವಿರೋಧಿ ಅಪರಾಧವಾಗಿದೆ ಎಂದು ತಿಳಿಸಿದರು.
ನುಲೇನೂರು ಶಂಕರಪ್ಪ, ಯಾದವರೆಡ್ಡಿ, ಸುರೇಶ್ ಬಾಬು, ತಿಪ್ಪೇಸ್ವಾಮಿ, ರುದ್ರಸ್ವಾಮಿ , ಧನಂಜಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.