ಬಿಡದಿ: ಮುಂದೆ ನಾನು ಮುಖ್ಯಮಂತ್ರಿ ಆಗುವ ಉದ್ದೇಶಕ್ಕೆ ಮಾಡುತ್ತಿರುವ ಕಾರ್ಯಗಾರ ಇದಲ್ಲ. ರಾಜ್ಯದ ಭವಿಷ್ಯಕ್ಕಾಗಿ ಇದು. ಎಲ್ಲರೂ ಯೋಧರಂತೆ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು.
ಈ ವೇಳೆ ಮಾತನಾಡಿದ ಅವರು, ದೇವರ ಪ್ರೇರಣೆಯಿಂದ ನಾನು ಈ ಭೂಮಿ ಖರೀದಿ ಮಾಡಿದೆ ಎಂದು ಮತ್ತೆ ಹೇಳ ಬಯಸುತ್ತೇನೆ. ಅದೇ ನಂಬಿಕೆ, ಪ್ರೇರಣೆಯಿಂದ ಇಲ್ಲೇ ಈ ಕಾರ್ಯಗಾರ ನಡೆಯುತ್ತಿದೆ. ಪಕ್ಷದ ಕಚೇರಿಯಲ್ಲಿ ಅಥವಾ ರೆಸಾರ್ಟ್ ನಲ್ಲಿ ಮಾಡಬಹುದಿತ್ತು. ನಾನು ಹಾಗೆ ಮಾಡದೆ ಈ ಮಣ್ಣಿನ ಮಡಿಲಲ್ಲಿ ಈ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದೆ.
ಈ ಕಾರ್ಯಗಾರ ಸ್ಥಳದ ಈ ಎರಡೂವರೆ ಎಕರೆ ಜಾಗದಲ್ಲಿ ನನ್ನ ತಂದೆ ತಾಯಿ ಹೆಸರಿನಲ್ಲಿ ಶಾಶ್ವತವಾದ ಒಂದು ಅನಾಥಾಶ್ರಮ, ಒಂದು ದೇಗುಲ ಹಾಗೂ ಎಂದು ಛತ್ರ ಕಟ್ಟುವ ಉದ್ದೇಶ ನನ್ನದು. ಅದನ್ನು ಮಾಡಲು ಈ ಕಾರ್ಯಕ್ರಮದ ಜಾಗ ಮೀಸಲು ಇಟ್ಟಿದ್ದೇನೆ. ಇದು ಎಲ್ಲರಿಗೂ ಮುಕ್ತವಾಗಿರುತ್ತದೆ.
ಇಂತಹ ಜಾಗದಿಂದಲೆ ಪಕ್ಷ ಮತ್ತೆ ಪುಟಿದೇಳುತ್ತಿದೆ. ಈಗ ಎಲ್ಲವೂ ಶುಭಾರಂಭ ಆಗಿದೆ. ಇನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಅದನ್ನು ಎಲ್ಲರೂ ಚಾಚೂ ತಪ್ಪದೇ ಮಾಡಬೇಕಿದೆ.
ರಾಷ್ಟ್ರೀಯ ಪಕ್ಷಗಳು ದಲಿತ-ಹಿಂದುಳಿದ ಜನರಿಗೆ ಮಾಡಿದ್ದೇನು? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಸರಕಾರ ಹಾಗೂ ಸಿದ್ದರಾಮಯ್ಯ ಸರಕಾರ ಈ ಜನರಿಗೆ ಕೊಟ್ಟಿದೇನು ಇಲ್ಲ. ಐದು ವರ್ಷ ಸಿಎಂ ಆಗಿದ್ದ ಅವರು ಎಷ್ಟೆಲ್ಲ ಮಾಡಬೇಕಿತ್ತು, ಆದರೆ ಮಾಡಲಿಲ್ಲ.
ಸಿದ್ದರಾಮಯ್ಯ ಅವರು 85,000 ಕೋಟಿ ರೂಪಾಯಿ ಹಣವನ್ನು ದಲಿತ ಸಮುದಾಯದ ಉದ್ಧಾರಕ್ಕೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆದರೆ ಆಗಿದೆಯಾ? ಯಾರಿಗೆ ಹೋಯಿತು ಆ ದುಡ್ಡು? ಗಂಗಾ ಕಲ್ಯಾಣ ಯೋಜನೆಯಲ್ಲೂ 2016ರಿಂದ ಯಾರಿಗೂ ಉಪಯೋಗವಾಗಿಲ್ಲ. ನಿಜವಾದ ಒಬ್ಬ ಫಲಾನುಭವಿಯನ್ನೂ ಗುರುತಿಸಿಲ್ಲ.
ಇನ್ನು ನರೇಂದ್ರ ಮೋದಿ ಅವರು ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎಲ್ಲವನ್ನೂ ಆರೆಸ್ಸೆಸ್ ನಿರ್ಧಾರ ಮಾಡುತ್ತದೆ. ಸೂಪರ್ ಹೈಕಮಾಂಡ್ ಆಗಿ ಆರೆಸ್ಸೆಸ್ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ಗುಣಮಟ್ಟದ ಆಮೂಲಾಗ್ರ ಬದಲಾವಣೆ ಮಾಡುವ ಉದ್ದೇಶ ನಮ್ಮದು. 6000 ಪಂಚಾಯತಿಗಳಲ್ಲಿ, ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಈ ಬದಲಾಣೆ ಆಗಲಿದೆ. ನಾನು ಹೇಳಿದ್ದೆಲ್ಲಾ ಮಾಡಿದ್ದೇನೆ.
ಈಗ ರಾಜ್ಯದಲ್ಲಿ ಅಮಾನುಷ ಸರಕಾರ ಇದೆ. ಹೃದಯ ಇಲ್ಲದ ಸರಕಾರ ಇದು. ಕೋರೋನ ದಿಂದ ಪ್ರಾಣ ಬಿಟ್ಟವರ ನೆರವಿಗೆ ಬರಲಿಲ್ಲ, ನೆಲಮಂಗಲ ಘಟನೆ ನೋಡಿ. ನೇಣಿಗೆ ಕೊರಳು ಕೊಟ್ಟ ಆ ಹೆಣ್ಣು ಮಗಳಿಗೆ ಒಂದು ಅನುಕಂಪದ ಕೆಲಸ, ಒಂದಿಷ್ಟು ಪರಿಹಾರ ಕೊಟ್ಟಿದ್ದರೆ ಆ ಮೂರು ಜೀವಗಳು ಉಳಿಯುತ್ತಿದ್ದವು. ಅದನ್ನು ಸರಕಾರ ಮಾಡಲಿಲ್ಲ. ವಾರಿಯರುಗಳು ಸತ್ತರೆ 30 ಲಕ್ಷ ಪರಿಹಾರ ಕೊಡಬೇಕು. ಅದನ್ನು ಕೂಡ ಕೊಟ್ಟಿಲ್ಲ.
ಇನ್ನು ಕುರಿ ಸತ್ತರೆ 5000 ಕೊಡಲಾಗುವುದು ಎಂದಿದ್ದರು ಸಿದ್ದರಾಮಯ್ಯ. ಬೆಳಗಾವಿಯಲ್ಲಿ ಭೀಮಪ್ಪ ಎಂಬಾತನ 30 ಕುರಿಗಳು ಮಣ್ಣು ಕುಸಿದು ಸತ್ತು ಹೋದವು. ಸಿಎಂ ಕಚೇರಿ ಹತ್ತಿರ ಆತ ಹೋದರೆ ಏನು ಆಗಲಿಲ್ಲ. ಸಿದ್ದರಾಮಯ್ಯ ಕಣ್ಣೆತ್ತಿ ನೋಡಲಿಲ್ಲ. ಕುರುಬ ಸಮುದಾಯದ ವ್ಯಕ್ತಿ ಆತ. ನಾನು 25000 ಕೊಟ್ಟು ಎರಡು ಕುರಿಯನ್ನು ನೀಡಿ ಕಳಿಸಿದೆ ಎಂದರು.