ಬೆಂಗಳೂರು: ಪ್ರಜಾತಂತ್ರ ವ್ಯವಸ್ಥೆ ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಾದದ ಹಕ್ಕು. ಮಾತುಕತೆ ಮೂಲಕ ಯಾವುದೇ ಸಮಸ್ಯೆ ಬಗೆಹರಿಸಬಹುದು. ಸ್ವಾತಂತ್ರ್ಯದ ಪ್ರತೀಕವೇ ಈ ಪ್ರಜಾತಂತ್ರ ವ್ಯವಸ್ಥೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರತಿಭಟನೆ ಸ್ವಾತಂತ್ರ್ಯ ಈ ದೇಶದ ಸಂವಿಧಾನ ನಮಗೆ ನೀಡಿರುವ ಹಕ್ಕು. ಇದನ್ನು ಬಿಜೆಪಿ ಸರ್ಕಾರ ಜನರಿಂದ ಕಸಿಯುತ್ತಿದೆ ಎಂದು ಕೆಪಿಸಿಸಿ ಅಧೆ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬ್ರಿಟೀಷರ ವಿರುದ್ಧ ಕಾಂಗ್ರೆಸ್ ಕೂಡ ಶಾಂತಿಯುತ ಪ್ರತಿಭಟನೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು. ದೇಶದ ಅನ್ನದಾತ ಕಳೆದ 10 ತಿಂಗಳಿಂದ ಶಾಂತಿಯುತ ಪ್ರತಿಭಟನೆ ಮಾಡಿ, ತಮ್ಮ ಭವಿಷ್ಯಕ್ಕೆ ಮಾರಕವಾಗಿರುವ ಕೃಷಿ ಕರಾಳ ಕಾಯ್ದೆಗಳ ರದ್ಧತಿಗೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಬ್ರಿಟೀಷರು ಕೂಡ ಈ ರೀತಿ ನಡೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ರೈತರನ್ನು ಮಾತುಕತೆಗೆ ಕರೆಯದೆ, ಹತ್ಯೆ ಮಾಡುವ ಮೂಲಕ ಬ್ರಿಟಿಷರನ್ನು ಮೀರಿಸುವ ಕ್ರೌರ್ಯ ಮೆರೆದಿದೆ. ದೇಶದಲ್ಲಿ ಶೇ. 70 ರಷ್ಟು ರೈತರಿದ್ದಾರೆ. ಸರ್ಕಾರ ಅವರ ಕಷ್ಟಗಳನ್ನು ಕೇಳದಿದ್ದ ಮೇಲೆ ಇನ್ಯಾರ ಸಮಸ್ಯೆ ಕೇಳುತ್ತದೆ?
ಈ ಮೂರು ರೈತ ವಿರೋಧಿ ಕಾಯ್ದೆಗಳಲ್ಲಿ ಗೊಂದಲ, ನ್ಯೂನ್ಯತೆಗಳಿವೆ ಎಂದು ಸುಪ್ರೀಂಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಇದಾದ ನಂತರವಾದರೂ ಕೇಂದ್ರ ಸರ್ಕಾರ ರೈತರ ಜತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಈ ಮೂಲಕ ಬಿಜೆಪಿಯದ್ದು ಬ್ರಿಟೀಷರನ್ನು ಮೀರಿಸುವ ಸರ್ವಾಧಿಕಾರಿ ಮನಸ್ಥಿತಿ ಎಂಬುದು ಸಾಬೀತಾಗಿದೆ.
ದೇಶದ ಅನ್ನದಾತನ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಬಿಜೆಪಿಯ ಈ ದರ್ಪವನ್ನು ಕಾಂಗ್ರೆಸ್ ಖಂಡಿಸುತ್ತದೆ. ಕೇಂದ್ರ ಸರ್ಕಾರ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗ, ಕಾನೂನು, ಸಂವಿಧಾನಕ್ಕೆ ಬೆಲೆ ಕೊಟ್ಟು, ತನ್ನ ಸರ್ವಾಧಿಕಾರ ಮನಸ್ಥಿತಿಯಿಂದ ಹೊರಬರಬೇಕು. ರೈತರ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜನರೇ ಈ ಸರ್ಕಾರವನ್ನು ಕಿತ್ತೊಗೆದು ದೇಶದ ರೈತರು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸಬೇಕು.
ನಾನು ನಮ್ಮ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಲ್ಲಿ ಮನವಿ ಮಾಡುತ್ತೇನೆ. ದೇಶದ ರೈತರು, ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಲು ನೀವು ಧೈರ್ಯವಾಗಿ ಮುನ್ನುಗ್ಗಿ. ನಿಮ್ಮ ಜತೆ ಇಡೀ ದೇಶ ನಿಲ್ಲಲಿದೆ. ಪ್ರಿಯಾಂಕಾ ಗಾಂಧಿ ಅವರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಇತರ ನಾಯಕರ ಜತೆ ಚರ್ಚಿಸಿ ನಮ್ಮ ಮುಂದಿನ ನಡೆಯನ್ನು ತೀರ್ಮಾನಿಸುತ್ತೇವೆ ಬಿಜೆಪಿ ವಿರುದ್ಧ ಈ ವಿಚಾರವಾಗಿ ಕಾನೂನು ಹೋರಾಟ ಮಾಡುವ ಅಗತ್ಯವಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.