ಬೆಂಗಳೂರು: ದೇಶದಲ್ಲಿ ನೀಚ ರಾವಣ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಅನ್ನದಾತರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠ ನಡೆಸಿದ ಅವರು,ಉತ್ತರ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆಗೆ ನೈತಿಕ ಹೊಣೆಹೊತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದೂ ಆಗ್ರಹಿಸಿದ್ದಾರೆ.
‘ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೋಡಿ ಜನ ಆತಂಕಪಡುತ್ತಿದ್ದಾರೆ. ದೇಶದಲ್ಲಿ ಅನ್ನದಾತನಿಗೆ ರಕ್ಷಣೆ ಇಲ್ಲವಾಗಿದೆ. ತನ್ನ ರಕ್ಷಣೆಗಾಗಿ ನಿರಂತರ ಹೋರಾಟ ಮಾಡುತ್ತಿರುವ ಅನ್ನದಾತರ ಮೇಲೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರು ರೈತರನ್ನು ಕಗ್ಗೊಲೆ ಮಾಡಲಾಗಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ಸಚಿವ ಅಜಯ್ ಮಿಶ್ರಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತರ ಹತ್ಯೆ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕಾರ ಕೊಲೆ ಮೊಕದ್ದಮೆ ದಾಖಲು ಮಾಡಿ, ಬಂಧಿಸಬೇಕು. ಮಿಶ್ರಾ ಅವರನ್ನೂ ಬಂಧಿಸಬೇಕು. ಹತ್ಯೆಗೊಳಗಾದ ರೈತರಿಗೆ ಪರಿಹಾರ ನೀಡಬೇಕು.
ಇದು ಬರೀ ನಾಲ್ವರು ರೈತರ ಕೊಲೆ ಮಾತ್ರವಲ್ಲ. ಇಡೀ ದೇಶದ ರೈತ ಸಮುದಾಯದ ಕೊಲೆ. ಪ್ರಜಾತಂತ್ರ ವ್ಯವಸ್ಥೆಯ ಕೊಲೆ. ಬಲಿಯಾದ ರೈತರ ಕುಟುಂಬ ಭೇಟಿ ಮಾಡಲು ಮುಂದಾದ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವುದು ಖಂಡನೀಯ. ಯಾವುದೇ ವಾರೆಂಟ್ ಇಲ್ಲದಿದ್ದರೂ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು, ಪುರುಷ ಪೊಲೀಸ್ ಅಧಿಕಾರಿಗಳು ಪ್ರಿಯಾಂಕಾ ಗಾಂಧಿ ಅವರ ಮೈ ಮೇಲೆ ಕೈ ಹಾಕಿ ಎಳೆದಾಡಿದ್ದಾರೆ. ಇದು ಇಡೀ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ. ಈ ರೀತಿ ನಡೆದುಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಅವರು ಯಾವ ಅಪರಾಧ ಮಾಡಿದ್ದರು? ಯಾಕಾಗಿ ಅವರನ್ನು ಬಂಧಿಸಿದ್ದಾರೆ? ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುವುದು ಅಪರಾಧವೇ? ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲು ಪೊಲೀಸರ ಬಳಿ ಯಾವ ವಾರೆಂಟ್ ಇತ್ತು?
ಸಾಂತ್ವನ ಹೇಳುವುದು ಭಾರತೀಯ ಸಂಸ್ಕೃತಿ. ಸಾಂತ್ವನ ಹೇಳಲು ಹೋದವರನ್ನೇ ಬಂಧಿಸುವುದು ಬಿಜೆಪಿಯ ಯಾವ ಸಂಸ್ಕೃತಿ? ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತಿದೆ. ಸರ್ವಾಧಿಕಾರಿ, ಹಿಟ್ಲರ್ ಮನಸ್ಥಿತಿಯ ಸರ್ಕಾರದ ಕ್ರೌರ್ಯ ಮಿತಿ ಮೀರಿದೆ. ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ನಿರ್ಮಿಸಿದ್ದಾರೆ.