ಚಿತ್ರದುರ್ಗ, (ಡಿ.20) : ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಡಿಯಲ್ಲಿ ಸ್ವಯಂ ಉದ್ಯೋಗ ಸ್ಥಾಪನೆ ಕುರಿತಂತೆ ಉತ್ತಮ ಅವಕಾಶಗಳಿದ್ದು, ಯುಜನತೆ ತಮ್ಮಲ್ಲಿರುವ ಕೌಶಲ್ಯಗಳಿಗೆ ಸಂಬಂಧಿಸಿದಂತೆ ಸ್ವಯಂ ಉದ್ಯೋಗ ಮಾಡಲು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ನಿರುದ್ಯೋಗ ಸಮಸ್ಯೆಯನ್ನು ನೀಗಿಸಿಕೊಳ್ಳಬಹುದು ಎಂದು ಪ್ರಾಂಶುಪಾಲ ಡಾ.ಭರತ್ ಪಿ.ಬಿ. ಹೇಳಿದರು.
ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಯೋಗದೊಂದಿಗೆ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕರಾದ ಡಾ.ಈ.ಮೋಹನ್ ರಾವ್ ಮಾತನಾಡಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಮೂಲಕ ಯುವಜನರಿಗೆ ಸಣ್ಣ ಕೈಗಾರಿಕೆಗಳಿಗೆ ಹಾಗೂ ಸಣ್ಣ ಉದ್ದಿಮೆ ಸ್ಥಾಪನೆ ಮಾಡಲು ಪ್ರೋತ್ಸಾಹ ಹಾಗೂ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಲು ಈ ಯೋಜನೆ ಸಹಕಾರಿಯಾಗಿದೆ. ಉಚಿತ ತರಬೇತಿ ನೀಡುವುದು, ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಒದಗಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯುಳ್ಳವರು ಆನ್‍ಲೈನ್‍ನಲ್ಲಿ ಅರ್ಜಿ ಹಾಕಬೇಕು.
ಸಾರ್ವಜನಿಕ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಾಲ ಸೌ¯ಭ್ಯವನ್ನು ನೀಡುತ್ತವೆ. ಫಲಾನುಭವಿಗಳು ಶೇ.10% ರಷ್ಟು ಬಂಡವಾಳವನ್ನು ಹಾಕಬೇಕು ಉಳಿದ ಹಣವನ್ನು ಸಾಲದ ರೂಪದಲ್ಲಿ ಪಡೆಯಬೇಕು. ಯೋಜನೆಯ ವೆಚ್ಚದ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉಪನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಶ್ರೀ ಎಂ.ಲಿಂಗುದೊರೈ ಉಪಸ್ಥಿತರಿದ್ದರು.
ಪ್ರೊ.ಸುಷ್ಮಿತಾ ದೇಬ್ ನಿರೂಪಿಸಿ, ಪ್ರೊ. ಎಸ್ ಚೇತನ್ ವಂದಿಸಿದರು.