ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಆಡಿಯೋ ಲಾಂಚ್ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆಯಲಾಗಿದೆ. ಆ ರೀತಿ ಚಪ್ಪಲಿ ಎಸೆದದ್ದು ಪುನೀತ್ ಅಭಿಮಾನಿಗಳು ಎನ್ನಲಾಗುತ್ತಿದೆ. ಆದರೆ ಈ ಘಟನೆಯನ್ನು ಇಡೀ ಚಿತ್ರರಂಗ ಖಂಡಿಸಿದೆ. ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.
ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ ಪ್ರೀತಿ ಮತ್ತು ಗೌರವವನ್ನು ಸಾರುತ್ತದೆ. ಇಲ್ಲಿ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ. ಪ್ರತಿಯೊಂದಕ್ಕೂ ಹಲವು ವಿಧಾನಗಳಲ್ಲಿ ಪರಿಹರಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಗೌರವದಿಂದ ನಡೆಸಿಕೊಳ್ಳಲು ಅರ್ಹರಾಗಿರುತ್ತಾರೆ. ತಾಳ್ಮೆಯಿಂದ ಮಾತುಕತೆಯ ಮೂಲಕವೆ ಪ್ರತಿಯೊಂದನ್ನು ಬಗೆಹರಿಸಿಕೊಳ್ಳಬಹುದು.
ಮೊನ್ನೆ ಹೊಸಪೇಟೆಯಲ್ಲಿ ನಡೆದ ಘಟನೆಯ ವಿಡಿಯೊ ನೋಡಿದ ಮೇಲೆ ನನ್ನ ಮನಸ್ಸಿಗೆ ತೀರಾ ನೋವಾಗಿದೆ. ಪಕ್ಕದಲ್ಲಿ ನಟಿ ಹಾಗೂ ಅನೇಕ ಮಂದಿ ಇದ್ದಾರೆ. ಅವರು ಈ ಯಾವುದೂ ಸಮಸ್ಯೆಗಳ ಭಾಗವಾಗಿಲ್ಲ, ಆದರೂ ಸಾರ್ವಜನಿಕ ವೇದಿಕೆಯಲ್ಲಿ ಅವರನ್ನು ಕೂಡ ಅವಮಾನ ಮಾಡುವುದು ನೋಡಿದರೆ ನಾವು ಕನ್ನಡಿಗರು ಇಂತಹ ಅನ್ಯಾಯದ ಪ್ರತಿಕ್ರಿಯೆಯನ್ನು ಎದುರಿಸಬೇಕೆ ಎಂಬ ಪ್ರಶ್ನೆ ಬರುತ್ತದೆ. ಈ ರೀತಿ ಸಾರ್ವಜನಿಕವಾಗಿ ಆಕ್ರೋಶ ತೋರಿಸುವುದು ಪರಿಹಾರವೇ. ದರ್ಶನ್ ವಿಚಾರದಲ್ಲಿ ಅವರ ಬಗ್ಗೆ ಪುನೀತ್ ಅಭಿಮಾನಿಗಳಿಗೆ ಬೇಸರ, ಅಸಮಾಧಾನ ಇರಬಹುದು.
ಇಂತಹ ಪ್ರತಿಕ್ರಿಯೆ ನೀಡುವುದನ್ನು ಸ್ವತಃ ಪುನೀತ್ ಅವರೇ ಒಪ್ಪುತ್ತಾ ಇದ್ದರೆ..?, ಪುನೀತ್ ಹೇಗಿದ್ದರು, ಅವರು ಹೇಗೆ ಬಾಳಿ ಬದುಕಿದ್ದರು ಎಂದು ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸುತ್ತೇನೆ. ತುಂಬಿದ ಜನರ ಮಧ್ಯೆ ಕ್ಷುಲ್ಲಕ ನಡವಳಿಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು, ಪ್ರೀತಿ, ಗೌರವ ಮತ್ತು ಘಟನೆಯನ್ನು ಎತ್ತಿ ತೋರಿಸುವ ಪುನೀತ್ ಅಭಿಮಾನಿಗಳು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬಹುದು. ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದಾಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನು ನಾನೆಂದಿಗೂ ನಿಲ್ಲಿಸುವುದಿಲ್ಲ. ಚಪ್ಪಲಿ ಎಸೆಯುವಂತಹ ಕೃತ್ಯಗಳಿಗೆ ಖಂಡಿತಾ ದರ್ಶನ್ ಅರ್ಹರಲ್ಲ, ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಕನ್ನಡ ಚಿತ್ರರಂಗ, ಈ ನಾಡಿನ ಜನರು ಉತ್ತಮ ನಡವಳಿಕೆಗೆ ಹೆಸರಾಗಿದೆ. ಭಾರತದಲ್ಲಿ ಕರ್ನಾಟಕ ಸಂಸ್ಕೃತಿಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗಿರುವಾಗ ನಾವು ಖಂಡಿತಾ ಇಂತಹ ಸಂದೇಶ ಹರಡಬಾರದು. ಪರಿಸ್ಥಿತಿಗೆ ಈ ರೀತಿ ಉದ್ರೇಕದಿಂದ ಕ್ರೋಧದಿಂದ ವರ್ತಿಸುವುದು ಖಂಡಿತಾ ಉತ್ತರವಲ್ಲ. ನಟರು, ಅವರ ಅಭಿಮಾನಿಗಳ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು, ಅದರ ಬಗ್ಗೆ ಮಾತನಾಡಲು ನಾನು ಯಾರೂ ಅಲ್ಲ, ಆದರೆ ನಾನು ದರ್ಶನ್ ಮತ್ತು ಪುನೀತ್ ಅವರಿಗೆ ಆಪ್ತನಾಗಿದ್ದವನು, ಅವರ ಜೀವನದಲ್ಲಿ ಹೊಂದಿದ್ದ ಸ್ಥಾನದಿಂದ ಇಂದು ನಾನು ಈ ರೀತಿ ನನ್ನ ಭಾವನೆಗಳನ್ನು ಬರೆಯಲು ಅರ್ಹನಾಗಿದ್ದೇನೆ ಎಂದು ಭಾವಿಸುತ್ತೇನೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ, ಈ ಚಿತ್ರರಂಗದಲ್ಲಿ 27 ವರ್ಷಗಳಿಂದ ಪ್ರಯಾಣ ಮಾಡುತ್ತಿರುವ ನಾನು ಒಂದು ವಿಷಯವನ್ನಂತೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಯಾವುದೂ, ಯಾರೂ ಕೂಡ ಶಾಶ್ವತವಲ್ಲ, ಇರುವಷ್ಟು ದಿನ ಪ್ರೀತಿ, ಗೌರವವನ್ನು ಹಂಚಿ ಬೇರೆಯವರಿಂದ ಅದನ್ನು ಪಡೆಯೋಣ. ಇದೊಂದೇ ಕೊನೆಯವರೆಗೂ ಇರುವುದು, ಗೆಲ್ಲುವುದು ಮತ್ತು ಪರಿಸ್ಥಿತಿಯನ್ನು ಜಯಿಸುವುದು ಎಂದಿದ್ದಾರೆ.