ಚಿತ್ರದುರ್ಗ : ವಿಜ್ಞಾವನ್ನು ಬರೀ ಉದ್ಯೋಗಕ್ಕಾಗಿ ಕಲಿಯುವುದಲ್ಲ. ಬದುಕಿನಲ್ಲಿ ವಿಜ್ಞಾನದ ಉಪಯುಕ್ತತೆಗಳನ್ನು ಅಳವಡಿಸಿಕೊಳ್ಳಿ” ಎಂದು ಚಿಂತಕರೂ, ಸಾಹಿತಿಗಳೂ ಆದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ವಿದ್ಯಾರ್ಥಿಗಳಿಗೆ ಕಿವಮಾತು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚಿತ್ರದುರ್ಗ, ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ ಚಿತ್ರದುರ್ಗ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ಕನ್ನಡ ವಿಚಾರ ಸಾಹಿತ್ಯ ವಿಷಯವಾಗಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಅವರು ಮುಂದುವರೆದು ಮಾತನಾಡುತ್ತಾ ” ಇಂದು ಮೂಢನಂಬಿಕೆ ಮತ್ತು ಅಂಧಶ್ರದ್ಧೆ ಬಿತ್ತುವವರು ಮೆರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರಶ್ನಿಸುವುದರ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮೌಢ್ಯವನ್ನು ತೊಡೆದು ಹಾಕಬೇಕು. ಪ್ರಯೋಗಶಾಲೆಯನ್ನು ಹೊರತುಪಡಿಸಿ ವಿಜ್ಞಾನವನ್ನು ವೈಚಾರಿಕತೆಯ ಮೂಲಕ ಕಲಿಯಬೇಕಿದೆ. ವೈಚಾರಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಲ್ಲಿ ಅದು ವಿಚಾರ ಸಾಹಿತ್ಯವಾಗಲು ಅನುಕೂಲವಾಗುತ್ತದೆ.
ವೈಜ್ಞಾನಿಕ ವಿಧಾನ ಎಲ್ಲಾ ಕಾಲದಲ್ಲಿಯೂ ಪ್ರಚಲಿತದಲ್ಲಿತ್ತು. ಇಂದು ಯುವಕರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇದೆ. ಅದನ್ನು ಬೆಳೆಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕಿದೆ. ಅಜ್ಞಾನ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಭಾಷಾ ಸಾಹಿತ್ಯವನ್ನು ಪ್ರೋತ್ಸಾಹಿಸಿ, ಬೆಳೆಸುತ್ತಾ ವಿಜ್ಞಾನ ಸಾಹಿತ್ಯವನ್ನೂ ಪ್ರೋತ್ಸಾಹಿಸಿ” ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಕೆ.ಎಂ.ಶಿವಸ್ವಾಮಿ” ಭಾಷೆ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಕನ್ನಡ ಸಾಹಿತ್ಯದ ಮೂಲಕ ವೈಜ್ಞಾನಿಕ ಪ್ರಜ್ಞೆ ಮೂಡಿಸಿ ಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ.ಪ್ರಶ್ನಿಸುವ ಮೂಲಕ ವಿಜ್ಞಾನವನ್ನು ಕಲಿಯಬೇಕಿದೆ” ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಶ್ರೀ ಎನ್. ಹೆಚ್.ಹನುಮಂತರಾಯ ಅಧ್ಯಕ್ಷತೆ ವಹಿಸಿದ್ದರು. ಕರಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಚ್.ಎಸ್.ಟಿ.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಚಳ್ಳಕೆರೆ ಯರಿಸ್ವಾಮಿ, ಎಂ.ಡಿ.ಲತೀಫ್ ಸಾಬ್ ಉಪಸ್ಥಿತರಿದ್ದ ವೇದಿಕೆಯಲ್ಲಿ ಕಸಾಪ ಕಾರ್ಯದರ್ಶಿ ಕೆ.ಪಿ.ಎಂ ಗಣೇಶಯ್ಯ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ವಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಮಹಾಂತೇಶ್ ವಂದಿಸಿದರು.