ನವದೆಹಲಿ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ಸಿಎಂ ಆಗಿ ಸುಖ್ವಿಂದರ್ ಸಿಂಗ್ ಮತ್ತು ಉಪ ಮುಖ್ಯಮಂತ್ರಿಯಾಗಿ ಅಗ್ನಿ ಹೋತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಹಿಮಾಚಲದ ರಾಜಧಾನಿ ಶಿಮ್ಲಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಭಾಗವಹಿಸಿದ್ದರು.
ಹೊಸದಾಗಿ ಆಯ್ಕೆಯಾದ ನಾಯಕರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ವೇದಿಕೆಯ ಮೇಲೆ ಹಿಮಾಚಲ ಪ್ರದೇಶವನ್ನು ಆರು ಬಾರಿ ಆಳಿದ ರಾಜವಂಶಸ್ಥ ದಿವಂಗತ ವೀರಭದ್ರ ಸಿಂಗ್ ಅವರಿಗೆ ಎಲ್ಲಾ ನಾಯಕರು ಗೌರವ ಸಲ್ಲಿಸಿದರು.
ಹಿಮಾಚಲ ಪ್ರದೇಶದ ಸಿಎಂ ಹುದ್ದೆಗೆ ಹಲವು ಪ್ರಯತ್ನಗಳು ನಡೆದಿದ್ದರೂ ಒಬ್ಬರನ್ನು ಆಯ್ಕೆ ಮಾಡುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕೊನೆಗೂ ಆಯ್ಕೆ ಕಸರತ್ತು ಅಂತ್ಯಗೊಳಿಸಿ ಕಾಂಗ್ರೆಸ್ ನಾಯಕತ್ವ ಶನಿವಾರ ಸುಖ್ವಿಂದರ್ ಸಿಂಗ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿತು.
ಇದೇ ವೇಳೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಖ್ವಿಂದರ್ ಸಿಂಗ್ ಅವರು ಬಸ್ ಚಾಲಕನ ಮಗ. ಅವರು ತಮ್ಮ ರಾಜಕೀಯ ವೃತ್ತಿಜೀವನವನ್ನು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಪ್ರಾರಂಭಿಸಿದರು.