ನವದೆಹಲಿ: ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ವಿವಾದ ಅಂದಿನಿಂದಾನೂ ಬಗೆಹರಿಯದ ಕಗ್ಗಂಟಾಗಿಯೇ ನಿಂತಿದೆ. ಸದ್ಯ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ. ಕಳೆದ ಕೆಲವು ದಿನಗಳಿಂದ ಗಡಿ ವಿವಾದ ತಾರಕಕ್ಕೇರಿದೆ. ಮಹಾರಾಷ್ಟ್ರದ ಎಂಇಎಸ್ ಪುಂಡರು ಕರ್ನಾಟಕದ ಬಸ್ ಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರ ಈಗ ಕಲಾಪದಲ್ಲೂ ಪ್ರತಿಧ್ವನಿಸಿದೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಇಬ್ಬರು ಸಂಸದರು ಇದನ್ನು ಪ್ರಸ್ತಾಪಿಸಿದ್ದಾರೆ. ಆದರೆ ಬೇರೆ ರೀತಿಯಲ್ಲಿಯೇ ಮಾತನಾಡಿದ ಮಹಾ ಸಂಸದರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಲೋಕಸಭಾ ಕಲಾಪದಲ್ಲಿ ಮಹಾರಾಷ್ಟ್ರ ಸಂಸದೆ ಸುಪ್ರಿಯಾ ಸುಳೆ ಗಡಿ ವಿವಾದದ ಬಗ್ಗೆ ಪ್ರಸ್ತಾಪ ಮಾಡುತ್ತಾ ಇದ್ದರು. ಈ ಮಧ್ಯೆ ಕರ್ನಾಟಕದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು. ಕರ್ನಾಟಕದ ಸಿಎಂ ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುತ್ತಿದೆ. ನಿನ್ನೆ ಮರಾಠಿಗರು ಕರ್ನಾಟಕದ ಗಡಿಗೆ ಹೋಗಿದ್ದರು. ಈ ವೇಳೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪ ಮಾಡುತ್ತಾ ಇದ್ದರು.
ಇದನ್ನು ಕೇಳಿಸಿಕೊಳ್ಳುತ್ತಿದ್ದ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರು ಖಡಕ್ ಆಗಿಯೇ ಎಲ್ಲರಿಗೂ ತಿರುಗೇಟು ನೀಡಿದ್ದಾರೆ. ಈಗ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಹೀಗಾಗಿ ಚರ್ಚೆಗೆ ಯಾರಿಗೂ ಅವಕಾಶ ನೀಡಬಾರದು. ಮಹಾರಾಷ್ಟ್ರದ ವಿರೋಧ ಪಕ್ಷದ ಸಂಸದರು, ಭಾಷೆ, ಸಂಸ್ಕೃತಿ ವಿಷಯದಲ್ಲಿ ಸುಖಾ ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.