ಮೈಸೂರು: ಜೆ ಎಸ್ ಎಸ್ ಕಾಲೇಜು ಬಳಿ ಇರುವ ಬಸ್ ನಿಲ್ದಾಣ ವಿವಾದಕ್ಕೆ ಕಾರಣವಾಗಿತ್ತು. ಬಸ್ ನಿಲ್ದಾಣದ ಮೇಲಿರುವ ಮೂರು ಡೂಮ್ ಗಳನ್ನು ನೋಡಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದರು. ಆ ಕಡೆ ಈ ಕಡೆ ಸಣ್ಣ ಗುಮ್ಮಟ ಇದ್ದು ಮಧ್ಯದಲ್ಲಿ ದೊಡ್ಡ ಗುಮ್ಮಟ ಇದ್ದರೆ ಅದು ಮಸೀದಿನೆ ಎಂದು ಹೇಳಿದ್ದರು. ಬಳಿಕ ಈ ವಿಚಾರ ದೊಡ್ಡ ವಿವಾದ ಉಂಟು ಮಾಡಿತ್ತು. ರಾಮದಾಸ್ ಮನವಿಯನ್ನು ಮಾಡಿಕೊಂಡಿದ್ದರು. ಅರಮನೆಯ ಮಾದರಿಯಲ್ಲಿ ಇರಬೇಕು ಎಂಬ ಕಾರಣಕ್ಕೆ ಹಲವು ಬಸ್ ನಿಲ್ದಾಣಗಳನ್ನು ಅದೇ ಡಿಸೈನ್ ನಲ್ಲಿ ಕಟ್ಟಿದ್ದೆವು. ಇದರ ವಿವಾದ ಮಾಡುವುದು ಬೇಡ ಎಂದು ಹೇಳಿದ್ದರು. ಆದರೂ ಮೈಸೂರಿನಲ್ಲಿ ಸಂಸದ ವರ್ಸಸ್ ಶಾಸಕ ಎಂಬಂತೆ ಈ ವಿಚಾರ ಸದ್ದು ಮಾಡಿತ್ತು.
ಇದೀಗ ಬಸ್ ನಿಲ್ದಾಣದ ಗುಮ್ಮಟಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದ್ದ ಮೂರು ಗುಂಬಜ್ ಗಳಲ್ಲಿ ಈಗ ಒಂದು ಗುಂಬಜ್ ಮಾತ್ರ ಉಳಿದಿದೆ. ಆ ಕಡೆ ಈ ಕಡೆ ಇದ್ದ ಗುಂಬಜ್ ಗಳನ್ನು ತೆಗೆಯಲಾಗಿದೆ. ಜೊತೆಗೆ ಬಣ್ಣವನ್ನು ಬದಲಾಯಿಸಲಾಗಿದೆ. ಗೋಲ್ಡನ್ ಕಲರ್ ಬಣ್ಣ ಹೋಗಿ ಈಗ ಕೆಂಪು ಬಣ್ಣವಾಗಿದೆ. ರಾತ್ರೋ ರಾತ್ರಿ ಬಣ್ಣ ಹಾಗೂ ಗುಂಬಜ್ ಬದಲಾಗಿರುವುದು ಎಲ್ಲರಿಗೂ ಶಾಕಿಂಗ್ ಎನಿಸಿದೆ.