ಸುದ್ದಿಒನ್, ಚಿತ್ರದುರ್ಗ, (ಅ.01) : ಸಾಮಾನ್ಯವಾಗಿ ಈರುಳ್ಳಿ ಬೆಳೆಗಾರರು ಮಾಡಿದಷ್ಟು ಸಾಹಸ ಇತರೆ ಬೆಳೆಗಾರರು ಮಾಡುವುದು ಕೊಂಚ ಕಷ್ಟ. ಬೆಲೆ ಸಿಕ್ಕರೂ ಸಿಗದಿದ್ದರು ಸರಿಯೇ ಒಟ್ಟಿನಲ್ಲಿ ಈರುಳ್ಳಿ ಬೆಳೆ ಬೆಳೆಯುವುದನ್ನು ಮಾತ್ರ ನಾವು ನಿಲ್ಲಿಸೊಲ್ಲ ಎನ್ನುತ್ತಾರೆ. ಈ ವಿಚಾರದಲ್ಲಿ ಬಯಲು ಸೀಮೆ ರೈತರು ಬಹುಗಟ್ಟಿಗರು.
ಸರಿಯಾದ ದರಕ್ಕೆ ಈರುಳ್ಳಿ ಮಾರಾಟ ಮಾಡಬೇಕು ಎಂದು ಒಮ್ಮೆ ನಿರ್ಧರಿಸಿದರೆ ಆಯ್ತು ಅದರಿಂದ ಹಿಂದೆ ಸರಿಯೊಲ್ಲ. ಇದಕ್ಕೆ ಸಾಕ್ಷಿಯಾಗಿದೆ ಚಳ್ಳಕೆರೆ ಭಾಗದ ರೈತರ ಸಾಹಸಗಾಥೆ.
ಇದನ್ನು ಅವರ ಮಾತಿನಲ್ಲೇ ಕೇಳೋಣ.
ಮೊದ್ಲು ದುಬಾರಿ ಬಾಡಿಗೆ ನೀಡಿ ಲಾರಿಗಳ ಮೂಲಕ ಈರುಳ್ಳಿಯನ್ನು ಕೋಲ್ಕತ್ತಾ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ವಿ. ಈಗ ನಾವೇಲ್ಲ ಒಂದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಇದೇ ಮೊದಲ ಬಾರಿಗೆ 20 ಟನ್ ಗೂ ಹೆಚ್ಚು ಈರುಳ್ಳಿಯನ್ನು 20 ಬೋಗಿಗಳಲ್ಲಿ ರೈಲಿನ ಮೂಲಕ ಕೋಲ್ಕತ್ತಾಗೆ ಸಾಗಿಸುತ್ತಿದ್ದೇವೆ’.
ಒಂದು 1 ಕೆಜಿ ಈರುಳ್ಳಿಗೆ 1.60 ಪೈಸೆಯಂತೆ ಬಾಡಿಗೆ ನೀಡಿ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ರೈಲ್ವೆ ನಿಲ್ದಾಣದಿಂದ ಕೋಲ್ಕತ್ತಾ ಮಾರುಕಟ್ಟೆಗೆ ಸಾಗಣೆ ಮಾಡಿದ್ದೇವೆ.
ಕೋಲ್ಕತ್ತ ಮಾರುಕಟ್ಟೆಗೆ ಈರುಳ್ಳಿಯನ್ನು ಲಾರಿಗಳ ಮೂಲಕ ಸಾಗಿಸುವಾಗ ಬಹಳ ದುಬಾರಿಯಾಗುತ್ತಿತ್ತು. ಹಾಗಾಗಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ವಿ. ಅವರು ಒಪ್ಪಿಕೊಂಡ್ರು..ಅದಕ್ಕೆ 20 ಟನ್ಗೂ ಅಧಿಕ ತೂಕದ ಈರುಳ್ಳಿ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಗೆ ಹಮಾಲಿ ಹಣ ಕೂಡ ಕಡಿಮೆ ವೆಚ್ಚದಲ್ಲಿ ಆಗುತ್ತಿದೆ ಎನ್ನುತ್ತಾರೆ ಬಂಜಗೆರೆ ರೈತ ಚಂದ್ರಣ್ಣ.