ಸುದ್ದಿಒನ್, ಚಿತ್ರದುರ್ಗ, (ಅ.01) : 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಈಗಾಗಲೇ ಜನತಾ ಪರ್ವ 1.0 ಮತ್ತು ಜೆಡಿಎಸ್ ಮಿಷನ್ – 123 ಮೂಲಕ ಸಿದ್ಧತೆ ಪ್ರಾರಂಭಿಸಿದೆ.
ಪಕ್ಷದ ನಾಯಕರಿಗೆ ಖುದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಬಿಡದಿಯ ಕೇತಗಾನಹಳ್ಳಿ ತೋಟದಲ್ಲಿ ನಾಲ್ಕು ದಿನದ ಕಾರ್ಯಾಗಾರ ನಡೆಸಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಕಾರ್ಯಾಗಾರದ ಮೊದಲ ದಿನ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು. ಅದರಲ್ಲಿ ಜೆಡಿಎಸ್ ಭದ್ರಕೋಟೆಯಾದ ಹಿರಿಯೂರು ಕ್ಷೇತ್ರಕ್ಕೆ ಉದ್ಯಮಿ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಅಂತಿಮಗೊಳಿಸಿದೆ. ನಾಯಕರ ಸೂಚನೆಯಂತೆ ವೀರೇಂದ್ರ ಪಪ್ಪಿ ಕ್ಷೇತ್ರಕ್ಕೆ ಅ. 1 ರಂದು ಅಧಿಕೃತವಾಗಿ ಆಗಮಿಸಿ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ.
ಅ.1 ರ ಬೆಳಗ್ಗೆ 9ಕ್ಕೆ ತೇರುಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ 10ಕ್ಕೆ ನೇಕ್ ಬಿ.ಬಿ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. 10:30 ಕ್ಕೆ ವೇದಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.
11 ಗಂಟೆಗೆ ಹಿರಿಯೂರು ಟೌನ್ ಟಿ.ಬಿ ವೃತ್ತದಲ್ಲಿ ಕಾರ್ಯಕರ್ತರ ಸಭೆ. 12.05 ಕ್ಕೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಎಲ್ಲಾ ಪದಾಧಿಕಾರಿಗಳೊಂದಿಗೆ ಶ್ರೀ ಕಣಿವೆ ಮಾರಮ್ಮದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಕ್ಷ ಸಂಘಟನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.