ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ನ.25): ಒಳಗಿನ ಭಾವನೆಗಳನ್ನು ಬರವಣಿಗೆಯ ಮೂಲಕ ಹೊರಸೂಸುವವರು ಅಂರ್ತಮುಖಿಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು, ವಾಸವಿ ಮಹಿಳಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ಯಕಾ ಮಹಲ್‍ನಲ್ಲಿ ಗುರುವಾರ ನಡೆದ ಕನ್ನಡದ ಹಬ್ಬ-2022 ಹಾಗೂ ಶ್ರೀಮತಿ ಸುಜಾತ ಪ್ರಾಣೇಶ್‍ರವರ ಮಹಾಮೌನನಾದ ಕವಲ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸುಜಾತ ಪ್ರಾಣೇಶ್ ಉತ್ತಮವಾದ ಕವಿತೆಗಳನ್ನು ಬರೆದಿದ್ದಾರೆ. 11 ಕವಿತೆಗಳುಳ್ಳ ಕವನ ಸಂಕಲನದಲ್ಲಿ ಹಬ್ಬಗಳು, ವಾಸವಿ ಜಯಂತಿ ಕುರಿತು ಬರಹಗಳಿವೆ. ಪರಿಸರದ ಬಗ್ಗೆ ಅದ್ಬುತವಾದ ಕಾಳಜಿಯಿಟ್ಟುಕೊಂಡಿದ್ದಾರೆ. ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರವನ್ನು ಹಾಳು ಮಾಡುತ್ತಿದ್ದರೂ ಶಾಂತಚಿತ್ತತೆಯಿಂದ ಪರಿಸರ ಎಲ್ಲವನ್ನು ನೋಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‍ಗೆ 107 ವರ್ಷಗಳಾಗಿದೆ. ಇದೊಂದು ಹಳೆ ಸಂಸ್ಥೆ, ಪ್ರತಿಯೊಬ್ಬರು ಸದಸ್ಯತ್ವ ಪಡೆದುಕೊಂಡು ಸಾಹಿತ್ಯ ಸಂಸ್ಥೆಯೊಳಗಿದ್ದು, ಕನ್ನಡ ಸಾಹಿತ್ಯ ಸೇವೆ ಮಾಡಿ ಎಂದು ಮನವಿ ಮಾಡಿದರು.
ಮಹಾಮೌನನಾದ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕವಿ ಪ್ರೊ.ಟಿ.ವಿ.ಸುರೇಶ್‍ಗುಪ್ತ ಆರ್ಯವೈಶ್ಯ ಜನಾಂಗದಲ್ಲಿ ಇಪ್ಪತ್ತು ಸಾಹಿತಿಗಳಿರುವುದು ಅತ್ಯಂತ ಸಂತೋಷದ ಸಂಗತಿ. ವ್ಯಾಪಾರ ಹಾಗೂ ಮೆನೆಯನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಸುಜಾತ ಪ್ರಾಣೇಶ್ ಸಮಯ ಒದಗಿಸಿಕೊಂಡು ಕವನ ಸಂಕಲನ ಹೊರತರುತ್ತಿರುವುದು ಸುಲಭದ ಕೆಲಸವಲ್ಲ. ಕವಿ, ಸಾಹಿತಿ, ಕಲಾವಿದರು, ನಾಟಕಕಾರರು ನಮ್ಮಲ್ಲಿದ್ದಾರೆ. ಕೇವಲ ವರ್ಣನೆ ಕವಿಗೆ ಮುಖ್ಯವಾಗಬಾರದು. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಅಂತಹ ಕೆಲಸವನ್ನು ಸುಜಾತ ಪ್ರಾಣೇಶ್ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿತೆ, ಕವನ, ಸಾಹಿತ್ಯದಲ್ಲಿ ಪ್ರತಿಭೆ, ರಸ ಇರಬೇಕು. ಸಾಮಾನ್ಯರನ್ನು ಸುಲಭವಾಗಿ ತಲುಪುವ ಸಾಹಿತ್ಯ ಜನಪ್ರಿಯ ಸಾಹಿತ್ಯವಾಗುತ್ತದೆ. ವರ್ಣನೆಯ ತಿರುವು ಸಾಹಿತ್ಯಕ್ಕಿರುವ ನಿಜವಾದ ಶಕ್ತಿ. ಅಂತಹ ಶಕ್ತಿಯನ್ನು ಸುಜಾತ ಪ್ರಾಣೇಶ್ ತಮ್ಮ ಕವನ ಸಂಕಲನದಲ್ಲಿ ಪ್ರದರ್ಶಿಸಿದ್ದಾರೆ. ರಾಗಿಯ ಮಹತ್ವವನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯದ ಕೃಷಿ ಮಾಡುವುದು ಶ್ರೇಷ್ಠತೆ. ಹಬ್ಬಗಳ, ಶೃಂಗಾರದ ವರ್ಣನೆಯಿದೆ. ಸಾಹಿತ್ಯ, ಸಾಹಿತಿ ಬೆಳೆಯಬೇಕಾದರೆ ನಿಜವಾಗಿಯೂ ಆಶ್ರಯ ಬೇಕು. ಹಾಗಾಗಿ ಪ್ರತಿಯೊಬ್ಬ ಓದುಗರು ಸುಜಾತ ಪ್ರಾಣೇಶ್‍ರವರ ಮಹಾಮೌನನಾದ ಕವನ ಸಂಕಲನವನ್ನು ಕೊಂಡು ಪ್ರೋತ್ಸಾಹಿಸಿ ಎಂದು ನೆರೆದಿದ್ದವರಲ್ಲಿ ವಿನಂತಿಸಿದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಎಲ್.ಆರ್.ವೆಂಕಟೇಶ್‍ಕುಮಾರ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಮಾ ಅನಂತ್, ಆರ್ಯವೈಶ್ಯ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಸುಜಾತ ಪ್ರಾಣೇಶ್, ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಎಂ.ವಿ.ರಮೇಶ್, ವಾಸವಿ ಮಹಿಳಾ ಸಂಘದ ಸಹ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ರಾಜಗೋಪಾಲ್ ವೇದಿಕೆಯಲ್ಲಿದ್ದರು. ಶ್ರೀಮತಿ ಪ್ರತಿಭಾ ವಿಶ್ವನಾಥ್, ಶ್ರೀಮತಿ ಜಲಜಾರಾಣಿ ನಿರೂಪಿಸಿದರು.