ಬೆಂಗಳೂರು: ಇದ್ದಕ್ಕಿದ್ದ ಹಾಗೇ ಶಾಲೆಯಲ್ಲಿಯೇ ಕುಸಿದು ಬಿದ್ದು 11 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರ್ ಡಿ ಎಂ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಪೋಷಕರು ಶಾಲೆಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ನಡೆದಿರುವ ಘಟನೆಯಾಗಿದೆ.
ಇಂದು ಶಾಲೆಗೆ ಯಲಹಂಕ ವ್ಯಾಪ್ತಿಯ ಬಿಇಓ ಅಶ್ವತ್ಥ್ ನಾರಾಯಣ್ ಭೇಟಿ ನೀಡಿದ್ದು, ವಿದ್ಯಾರ್ಥಿ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಸಂಬಂಧ ಇನ್ನು ಯಾವುದೇ ದೂರು ದಾಖಲಾಗಿಲ್ಲ. ನಿಶಿತಾ ಕೊನೆಯ ಕ್ಷಣಗಳು ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿ ನಿಶಿತಾ, ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ತಮ್ಮನನ್ನು ಶಾಲೆಯಿಂದ ಹೊರಗೆ ಕರೆದುಕೊಂಡು ಹೋಗಿ, ತಮ್ಮ ಅಜ್ಜಿಯ ಜೊತೆಗೆ ಬಿಟ್ಟು, ಮತ್ತೆ ವಾಪಾಸ್ ಶಾಲೆಗೆ ಬಂದಿದ್ದಳು. 1.50ರ ಸುಮಾರಿಗೆ ನಿಶಿತಾ ಶಾಲೆಯಲ್ಲಿಯೇ ಕುಸಿದು ಬಿದ್ದಿದ್ದಾಳೆ. ಶಾಲಾ ಸಿಬ್ಬಂದಿ ಪೋಷಕರಿಗೆ ಮಾಹಿತಿ ತಿಳಿಸಿ, ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಯೊಂದಕ್ಕೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.
ಆದರೆ ಅಷ್ಟರಲ್ಲಾಗಲೇ ಬಾಲಕಿ ನಿಶಿತಾ ಸಾವನ್ನಪ್ಪಿದ್ದಳು. ವೈದ್ಯರು ಅದನ್ನು ತಿಳಿಸಿದ ಬಳಿಕ ಮತ್ತೆ ಎಂಎಸ್ ರಾಮಯ್ಯ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಬಾಲಕಿ ಸಾವನ್ನಪ್ಪಿರುವ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ. ಆದ್ರೆ ವಿದ್ಯಾರ್ಥಿನಿ ನಿಶಿತಾ ಅವರ ಅಜ್ಜಿ ಶಾಲೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕರು ಮೊಮ್ಮಗಳನ್ನು ಹೊಡೆದಿದ್ದಾರೆ. ಮಧ್ಯಾಹ್ನ ಚೆನ್ನಾಗಿಯೇ ಇದ್ದಳು. ತಮ್ಮನನ್ನು ಕರೆದುಕೊಂಡು ಬಿಟ್ಟು ಹೋದಾಗಲೂ ಚೆನ್ನಾಗಿಯೇ ಇದ್ದಳು. ಆದ್ರೆ ಬಳಿಕ ಕರೆ ಮಾಡಿ ಈ ರೀತಿಯ ವಿಚಾರವನ್ನು ಹೇಳಿದ್ದಾರೆ ಎಂದು ಅಜ್ಜಿ ನರಸಮ್ಮ ಶಾಲೆಯ ವಿರುದ್ಧ ಆರೋಪ ಮಾಡಿದ್ದಾರೆ.