ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.27): ಭಾರತೀಯ ಜನತಾಪಾರ್ಟಿ ಅಲ್ಪಸಂಖ್ಯಾತರ ವಿರೋಧಿಯಲ್ಲ ಎನ್ನುವುದನ್ನು ಮೊದಲು ಮುಸ್ಲಲ್ಮಾನರು ಅರ್ಥಮಾಡಿಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ರವಿಮಯೂರ್ ಹೋಟೆಲ್‍ನಲ್ಲಿ ಗುರುವಾರ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ದಿಯಲ್ಲಿ ಅಲ್ಪಸಂಖ್ಯಾತರ ಪಾತ್ರ ಬಹಳ ಪ್ರಮುಖವಾದುದು. ಕಳೆದ ಎಪ್ಪತ್ತು ವರ್ಷಗಳಿಂದಲೂ ಅಲ್ಪಸಂಖ್ಯಾತರನ್ನು ಮತ ಬ್ಯಾಂಕನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಬಿಜೆಪಿ.ಅಲ್ಪಸಂಖ್ಯಾತರ ವಿರೋಧಿ ಎಂದು ಅಪಪ್ರಚಾರದಲ್ಲಿ ತೊಡಗಿದೆ. ಬಿಜೆಪಿ.ಯಾವ ಜಾತಿ ಪರವಾಗಿಲ್ಲ. ಎಲ್ಲಾ ಕೋಮಿನವರ ಪರವಾಗಿದೆ ಎನ್ನುವುದನ್ನು ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಬಿಜೆಪಿ.ಅಲ್ಪಸಂಖ್ಯಾತ ಮೋರ್ಚಾ ಮೇಲಿದೆ. ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಜಾಸ್ತಿಯಿದ್ದಾರೆ. ಬಡವರ ಸೇವೆ ಮಾಡಲು ಪಕ್ಷದಲ್ಲಿ ಸಾಕಷ್ಟು ಅವಕಾಶವಿದೆ. ಎಲ್ಲವನ್ನು ಬಳಸಿಕೊಳ್ಳುವಂತೆ ಶಾಸಕರು ಕರೆ ನೀಡಿದರು.
ಕ್ರಿಶ್ಚಿಯನ್, ಮುಸ್ಲಿಂ, ಎಲ್ಲಾ ಜಾತಿಯ ಬಡವರು ನಗರದ ಘೋಷಿತ ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಬರೀ ನಗರವೊಂದರಲ್ಲಿಯೇ ನಲವತ್ತರಿಂದ ಐವತ್ತು ಸಾವಿರದಷ್ಟು ಇರಬಹುದು. ನಗರದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಹನ್ನೆರಡು ಸಾವಿರ ಬಡ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದೇವೆ. ಆಶ್ರಯ ಮನೆಗಳ ಸಾಲ ಕೂಡ ಮನ್ನ ಮಾಡಲಾಗಿದೆ. ಮುಸಲ್ಮಾನರನ್ನು ಸಂಘಟಿಸಿ ಪಕ್ಷಕ್ಕೆ ಸೆಳೆಯುವ ಕಾರ್ಯತಂತ್ರವನ್ನು ಅಲ್ಪಸಂಖ್ಯಾತ ಮೋರ್ಚಾ ಮಾಡಬೇಕಿದೆ. ಕೊರೋನಾದಲ್ಲಿ ಮುಂದುವರೆದ ದೇಶಗಳಲ್ಲಿ ಆರ್ಥಿಕ ಸ್ಥಿತಿ ಅಯೋಮಯವಾಗಿದೆ. ಆದರೆ ನಮ್ಮ ದೇಶದ ಪ್ರಧಾನಿ ಮೋದಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿದ್ದರಿಂದ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ. ಚೀನಾ ಇನ್ನು ಕೊರೋನಾದಿಂದ ಹೊರಬರಲು ಆಗುತ್ತಿಲ್ಲ ಎಂದು ಹೇಳಿದರು.
ಚುನಾವಣೆ ಸಮೀಪ ಬಂದಾಗ ಕಾಂಗ್ರೆಸ್‍ನವರು ಬಿಜೆಪಿ.ಅಲ್ಪಸಂಖ್ಯಾತರ ವಿರೋಧಿ ಎಂದು ಬಣ್ಣ ಕಟ್ಟುತ್ತಾರೆ. ಅದಕ್ಕೆ ಯಾರು ಕಿವಿಗೊಡುವುದು ಬೇಡ. ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ. ಬಿಜೆಪಿ.ಗೆ ಧರ್ಮಕ್ಕಿಂತ ದೇಶ ಮುಖ್ಯ, ಸಿಎಎ. ಎನ್‍ಆರ್‍ಸಿ. ಬಗ್ಗೆ ಅಲ್ಪಸಂಖ್ಯಾತರಲ್ಲಿ ವಿರೋಧಿಗಳು ತಪ್ಪು ತಿಳುವಳಿಕೆ ಮೂಡಿಸುತ್ತಿದ್ದಾರೆ. ಯಾರೂ ಹೆದರುವುದು ಬೇಡ. ಮುಸ್ಲಿಂ, ಕ್ರಿಶ್ಚಿಯನ್, ಜೈನರಿಗೆ ಬಿಜೆಪಿ.ಯಿಂದ ಯಾವುದೇ ತೊಂದರೆಯಾಗಿಲ್ಲ. ಜಿಲ್ಲೆಯಾದ್ಯಂತ ಅಲ್ಪಸಂಖ್ಯಾತ ಮೋರ್ಚಾವನ್ನು ಸಂಘಟಿಸಿ ಪಕ್ಷಕ್ಕೆ ಬಲ ನೀಡಿ ಎಂದು ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಬಿಜೆಪಿ. ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಸೈಯದ್ ಸಲಾಂಜೀ ಮಾತನಾಡಿ ಸಿಎಎ, ಎನ್‍ಆರ್‍ಸಿ, ಗೋಹತ್ಯೆ, ಹಿಜಾಬ್, ಆರ್ಟಿಕಲ್ 370 ಇವುಗಳ ಬಗ್ಗೆ ವಿರೋಧಿಗಳು ವಿನಾಕಾರಣ ಗೊಂದಲ ಸೃಷ್ಠಿಸುತ್ತಿರುವುದಕ್ಕೆ ಅಲ್ಪಸಂಖ್ಯಾತರಲ್ಲಿ ದುಗುಡ ಬೇಡ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದಿಂದ ಎಲ್ಲವನ್ನು ಬಿಟ್ಟು ನಮ್ಮ ದೇಶಕ್ಕೆ ವಲಸೆ ಬಂದಿರುವವರನ್ನು ಗುರುತಿಸಿ ಅವರುಗಳನ್ನು ಭಾರತದ ಪ್ರಜೆಗಳನ್ನಾಗಿ ಮಾಡಿಕೊಳ್ಳುವುದು ಈ ಕಾಯಿದೆ ಉದ್ದೇಶ. ಇದರಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಠಪಡಿಸಿದರು.
ಕಾಂಗ್ರೆಸ್‍ನವರಿಗೆ ಮಾತ್ರ ಕಾಶ್ಮೀರದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣುತ್ತಿವೆ. ಬಿಜೆಪಿ.ತನ್ನ ಪ್ರಣಾಳಿಕೆಯಲ್ಲಿರುವುದನ್ನು ಮಾತ್ರ ಈಡೇರಿಸಿದೆಯೇ ವಿನಃ ಅದನ್ನು ಬಿಟ್ಟು ಬೇರೆ ಯಾವುದಕ್ಕೂ ಕೈಹಾಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಿ ಚುನಾವಣೆಯಲ್ಲಿ ಪಕ್ಷಕ್ಕೆ ಓಟು ಕೊಡಿಸುವ ಹೊಣೆಗಾರಿಕೆ ಅಲ್ಪಸಂಖ್ಯಾತ ಮೋರ್ಚಾ ಮೇಲಿದೆ. ಜಿಲ್ಲೆಯ ಒಂಬತ್ತು ಮಂಡಲಗಳಲ್ಲಿಯೂ ಕಾರ್ಯಕಾರಿಣಿ ಸಭೆ ನಡೆಸಿ ಎಂದು ಸೂಚಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಅಧಿಕಾರಕ್ಕಿಂತ ಬಿಜೆಪಿ.ಗೆ ಮೊದಲು ದೇಶ ಮುಖ್ಯ. ಅಲ್ಪಸಂಖ್ಯಾತರನ್ನು ನಮ್ಮ ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿಖಾನ್‍ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಅಲ್ಪಸಂಖ್ಯಾತರನ್ನು ಗೌರವಿಸಿದ್ದಾರೆ. ಅಬ್ದುಲ್ ಕಲಾಂರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿ.ಗೆ ಸಲ್ಲುತ್ತದೆ. ಬಿಜೆಪಿ.ಕೋಮುವಾದಿ ಅಲ್ಲ ಎನ್ನುವ ಜಾಗೃತಿಯನ್ನು ಅಲ್ಪಸಂಖ್ಯಾತರಲ್ಲಿ ಮೂಡಿಸಿ ಎಂದು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದವರಲ್ಲಿ ವಿನಂತಿಸಿದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಒಂಬತ್ತು ಮಂಡಲಗಳಲ್ಲಿ ಸಭೆ ನಡೆಸಿ ಬಿಜೆಪಿ.ಯೊಂದಿಗೆ ಅಲ್ಪಸಂಖ್ಯಾತರನ್ನು ಸೇರಿಸಿ ಪಕ್ಷವನ್ನು ಶಕ್ತಿಯುತವನ್ನಾಗಿಸಿ ಎಂದು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ತಿಳಿಸಿದರು.
ಬಿಜೆಪಿ.ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸೈಯದ್ ನವಾಜ್ ಮಾತನಾಡಿ ಪಕ್ಷದಲ್ಲಿ ಅಲ್ಪಸಂಖ್ಯಾತರು ಯಾವ ರೀತಿ ತೊಡಗಿಸಿಕೊಳ್ಳುತ್ತಾರೆನ್ನುವುದು ಮುಖ್ಯ. ಜಿಲ್ಲೆಯ ಒಂಬತ್ತು ಮಂಡಲಗಳಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ಪಕ್ಷವನ್ನು ಸಂಘಟಿಸಬೇಕಾಗಿರುವುದರಿಂದ ಅಲ್ಪಸಂಖ್ಯಾತ ಮೋರ್ಚಾವನ್ನು ಕಟ್ಟಿ ಬೆಳೆಸುವ ದೃಢ ಸಂಕಲ್ಪ ಮಾಡಬೇಕಿದೆ. ವಿರೋಧಿಗಳು ಮಾಡುತ್ತಿರುವ ಅಪಪ್ರಚಾರವನ್ನು ಹೋಗಲಾಡಿಸಬೇಕೆಂದರೆ ಅಲ್ಪಸಂಖ್ಯಾತರು ಬಿಜೆಪಿ.ಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್ ಮಾತನಾಡುತ್ತ ಭಾರತೀಯ ಜನತಾಪಾರ್ಟಿಗೆ ಏಕೆ ಸೇರಬಾರದು ಎಂದು ಅಲ್ಪಸಂಖ್ಯಾತರು ಮೊದಲು ಚಿಂತಿಸಬೇಕಿದೆ. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎನ್ನುವ ಚಿಂತನೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಮೂರು ನೂರಕ್ಕೂ ಹೆಚ್ಚು ಯೋಜನೆಗಳನ್ನು ಬಡವರಿಗೆ ನೀಡಿದ್ದಾರೆ. ಬಿಜೆಪಿ.ಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‍ಗೆ ಪ್ರತ್ಯುತ್ತರ ನೀಡುವುದು ನಿಮ್ಮ ಕೈಯಲ್ಲಿದೆ. ಶ್ಯಾಂಪ್ರಸಾದ್ ಮುಖರ್ಜಿ, ಪಂಡಿತ್ ದೀನ್‍ದಯಾಳ್ ಇವರುಗಳ ಆದರ್ಶ, ತತ್ವ, ಸಿದ್ದಾಂತಗಳನ್ನು ಅಲ್ಪಸಂಖ್ಯಾತರು ತಿಳಿದುಕೊಂಡಾಗ ಪಕ್ಷದ ಧ್ಯೇಯ ಧೋರಣೆಗಳು ಏನು ಎನ್ನುವುದು ಮನವರಿಕೆಯಾಗಲಿದೆ ಎಂದರು.
ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ನಯಾಜ್ ಅಹಮದ್ ಮಾತನಾಡಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಮೌಲಾಸಾಬ್, ಅಸ್ಗರ್ ಅಹಮದ್, ಮೊಹಿದ್ದೀನ್ ವೇದಿಕೆಯಲ್ಲಿದ್ದರು.
ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಶಾಹೀದ್, ಸೈಫುಲ್ಲಾ, ಕಾರ್ಯಾಲಯ ಕಾರ್ಯದರ್ಶಿ ಎಂ.ಡಿ.ಮುಬಾರಕ್ ಸೇರಿದಂತೆ ಒಂಬತ್ತು ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.