ಚಿತ್ರದುರ್ಗ. ಅ.27: ಅಪಘಾತ, ಪ್ರಕೃತಿ ವಿಕೋಪ, ಹಾನಿ ಸೇರಿದಂತೆ ಆಪತ್ಕಾಲದಲ್ಲಿ ಸ್ಪಂದನೆ ತೋರುವುದು ಮಹತ್ವದ್ದಾಗಿದೆ. ತೊಂದರೆಯಲ್ಲಿ ಸಿಲುಕಿದ ವ್ಯಕ್ತಿಗಳಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದರೆ, ಅದು ಜೀವ ಉಳಿಸಲು ಪರಿಣಾಮಕಾರಿಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗುರುವಾರ ವಿವಿಧ ಇಲಾಖೆ ಸಿಬ್ಬಂದಿಗೆ ಆಯೋಜಿಸಲಾಗಿರುವ ಮೂರು ದಿನಗಳ ಕೌಶಲ್ಯ ಆಧಾರಿತ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಗಾರ ಉದ್ಘಾಟಸಿ ಅವರು ಮಾತನಾಡಿದರು.
ಆಪತ್ಕಾಲದಲ್ಲಿ ಕೇವಲ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಮಾತ್ರ ಸ್ಪಂದಿಸಬೇಕು ಎಂದು ತಿಳಿಯುವುದು ಸರಿಯಲ್ಲ. ಸ್ಥಳದಲ್ಲಿ ಇರುವ ಯಾವುದೇ ವ್ಯಕ್ತಿ ಪ್ರಥಮ ಚಿಕಿತ್ಸೆ ನೀಡಬಹುದು. ಈ ಕುರಿತು ತರಬೇತಿ ಹೊಂದಿದ್ದರೆ ನೀಡುವ ಪ್ರಥಮ ಚಿಕಿತ್ಸೆ ಫಲಪ್ರದವಾಗುತ್ತದೆ. ಅಪಘಾತದಲ್ಲಿ ಜೀವ ಉಳಿಸಿದರೆ ಆತ್ಮ ಸಂತೃಪ್ತಿ ದೊರೆಯುತ್ತದೆ.
ಆಪತ್ಪಾಂಧವರೇ ದೇವರ ರೂಪದಲ್ಲಿ ಬಂದು ಜೀವ ಉಳಿಸುತ್ತಾರೆ. ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಪೊಲೀಸ್, ಅಗ್ನಿಶಾಮಕ, ಬೆಸ್ಕಾಂ, ಸಾರಿಗೆ ಇಲಾಖೆ, ಗೃಹ ರಕ್ಷಕ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಆರೋಗ್ಯ ಇಲಾಖೆಯಿಂದಲೇ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ. ಸಿಬ್ಬಂದಿಗಳು ಗಮನವಿಟ್ಟು ಪ್ರಾಯೋಗಿಕವಾಗಿ ತರಬೇತಿ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ರಂಗನಾಥ್ ಮಾತನಾಡಿ, ವಿವಿಧ ಇಲಾಖೆಗಳ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಇತರ ಇಲಾಖೆ ಸಿಬ್ಬಂದಿ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು ಉತ್ತಮ ತರಬೇತಿ ನೀಡುತ್ತಾರೆ. ಶಿಬಿರಾರ್ಥಿಗಳು ನೈಜ ಜೀವನದಲ್ಲಿನ ಸನ್ನಿವೇಶಗಳನ್ನು ಎದುರಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳಬೇಕು. ಹೀಗೆ ಪಡೆದ ಜ್ಞಾನ ಇತರರಿಗೂ ತಿಳಿಸಬೇಕು. ಆರೋಗ್ಯ ಇಲಾಖೆಯಿಂದ ಜಿಲ್ಲೆ, ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಪಂಚಾಯತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಪತ್ಕಾಲದಲ್ಲಿ ನೀಡುವ ಪ್ರಥಮ ಚಿಕಿತ್ಸೆಯಿಂದ ಶೇ.50 ರಷ್ಟು ಸಾವುಗಳು ಸಂಭವಿಸುವುದನ್ನು ತಪ್ಪಿಸಬಹುದು. ಈ ಸಂದರ್ಭದಲ್ಲಿ ದೊರಕುವ ಗೋಲ್ಡನ್ ಅವರ್ ಹಾಳು ಮಾಡಬಾರದು. ಕೋವಿಡ್ ಸಂದರ್ಭದಲ್ಲಿ ಹಲವಾರು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿವೆ. ನೈಸರ್ಗಿಕ ಅವಘಡಗಳ, ಸಣ್ಣ ಪುಟ್ಟ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಇರುವವರೇ ಪ್ರಥಮ ಹಂತದ ಪ್ರತಿಕ್ರಿಯೆ ನೀಡಿದ ಚಿಕಿತ್ಸೆ ನೀಡುವಂತಾಗಬೇಕು. ಮುಂದಿನ ದಿನಗಳಲ್ಲಿ ಸ್ವಯಂ ಪ್ರೇರಿತವಾಗಿ ಆಗಮಿಸುವ ಸಾರ್ವಜನಿಕರಿಗೂ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು ಎಂದರು.
ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಎಸ್.ಬಿ.ರವೀಂದ್ರ ಮಾತನಾಡಿ, ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತುರ್ತು ಸೇವೆಗಳನ್ನು ಆರಂಭಿಸಲಾಗಿದೆ. ವಿದೇಶಗಳಿಂದಲೂ ಚಿಕಿತ್ಸೆಗೆಂದು ಭಾರತಕ್ಕೆ ಆಗಮಿಸುತ್ತಾರೆ. ಅಪಘಾತ ಸಂದರ್ಭದಲ್ಲಿ ಸ್ಪಂದಿಸುವ ಕೌಶಲ್ಯ ಎಲ್ಲಾ ಸಾರ್ವಜನಿಕರಲ್ಲಿ ಬೆಳೆಯಬೇಕು.
ಇದರಿಂದ ಪ್ರತಿನಿತ್ಯ ಸಾವಿರಾರು ಜನರ ಪ್ರಾಣ ಉಳಿಯುತ್ತದೆ. ಅಪಘಾತ ಸಂದರ್ಭದಲ್ಲಿ ಸ್ಪಂದಿಸುವ ಸಾರ್ವಜನಿಕರಿಗೆ ಕಾನೂನಿನ ಸಮಸ್ಯೆ ಎದುರಾಗುವುದಿಲ್ಲ. ಇದಕ್ಕಾಗಿ ಕಾನೂನು ರೂಪಿಸಲಾಗಿದೆ. ವಿವಿಧ ಇಲಾಖೆಯ ಸಿಬ್ಬಂದಿ ತರಬೇತಿಯ ಲಾಭ ಪಡೆದು ಉತ್ತಮ ಗುಣಮಟ್ಟ ಸೇವಯನ್ನು ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಡ್ ಸಿ.ಕೆ.ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳು, ತರಬೇತಿಯಲ್ಲಿ ಭಾಗಹಿಸಲು ಆಗಮಿಸಿದ ಪೊಲೀಸ್, ಸಾರಿಗೆ, ಬೆಸ್ಕಾಂ, ಗೃಹ ರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.