ಚಿತ್ರದುರ್ಗ, (ಅ.22) : ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಕೆ. ನಂದಿನಿ ದೇವಿ ಅವರನ್ನು ವರ್ಗಾವಣೆ ಮಾಡಿ ಅವರಿದ್ದ ಹುದ್ದೆಗೆ ಎಂ.ಎಸ್. ದಿವಾಕರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಎಂ.ಎಸ್.ದಿವಾಕರ ಐಎಎಸ್ ಅವರು
ಹೆಚ್ಚುವರಿ ಕೃಷಿ ನಿರ್ದೇಶಕರು, ಕೃಷಿ ಸಚಿವಾಲಯ, ಬೆಂಗಳೂರು, ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ದಿವಾಕರ ಅವರ ಪರಿಚಯ :
ಇವರು ದಾವಣಗೆರೆ ಜಿಲ್ಲೆ ದಾವಣಗೆರೆ ತಾಲ್ಲೂಕು ಗಂಗನಕಟ್ಟೆ ಗ್ರಾಮದ ದಿವಂಗತ ಜಿಎಂ ಶಿವಮೂರ್ತಿ ಮುತ್ತು ನಾಗರತ್ನಮ್ಮ ಇವರ ಮಗ. ತಂದೆ ಶಿಕ್ಷಕರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗಂಗನಕಟ್ಟೆ ಯಲ್ಲಿ ಮುಗಿಸಿ ಹೈಸ್ಕೂಲ್ ಮತ್ತು ಪಿಯುಸಿಯನ್ನು ಪಕ್ಕದ ಗ್ರಾಮಗಳಲ್ಲಿ ಮುಗಿಸಿರುತ್ತಾರೆ. ನಂತರ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ (ಕೃಷಿ) ಪದವಿಯಲ್ಲಿ ಬಂಗಾರದ ಪದಕ ಪಡೆಯುವುದರೊಂದಿಗೆ ಅತಿ ಹೆಚ್ಚು ಅಂಕ ಗಳಿಸಿ ನಂತರ ಎಂಎಸ್ಸಿ (ಕೃಷಿ) ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮುಗಿಸಿರುತ್ತಾರೆ. ಕಾಲೇಜು ಮುಗಿಸಿದ ತಕ್ಷಣವೇ ಕೃಷಿ ಇಲಾಖೆಯಲ್ಲಿ 2002ರಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ. ಮುಂದೆ ಉಪ ಕೃಷಿ ನಿರ್ದೇಶಕರಾಗಿ ಮತ್ತು ಜಂಟಿ ಕೃಷಿ ನಿರ್ದೇಶಕ ರಾಗಿ ಬಡ್ತಿ ಹೊಂದಿ ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ನಂತರ ಅಪರ ಕೃಷಿ ನಿರ್ದೇಶಕರಾಗಿ ಬಡ್ತಿ ಪಡೆದು ಬೆಂಗಳೂರು ಕೃಷಿ ಆಯುಕ್ತಾಲಯ ಹೆಚ್ಚುವರಿ ಕೃಷಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.
ಈ ನಡುವೆ ಕೃಷಿ ಇಲಾಖೆಯಲ್ಲಿ k-kisan ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇಲಾಖೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಶ್ರಮ ವಹಿಸಿರುತ್ತಾರೆ. ಹೀಗಾಗಿ ಕರ್ನಾಟಕ ಸರ್ಕಾರ ಇವರ ಕಾರ್ಯವೈಖರಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಯುಪಿಎಸ್ಸಿ ಗೆ ಅವರನ್ನು ಮೌಖಿಕ ಪರೀಕ್ಷೆಗೆ ಪರಿಗಣಿಸುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಡಿಸೆಂಬರ್ ತಿಂಗಳಲ್ಲಿ ನಡೆದ ಮೌಖಿಕ ಪರೀಕ್ಷೆಯಲ್ಲಿ ದಿವಾಕರ್ ಎಂಎಸ್ ಇವರು ಐಎಎಸ್ ಹುದ್ದೆಗೆ ಆಯ್ಕೆಗೊಂಡು ಇದೀಗ ಚಿತ್ರದುರ್ಗಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.