ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ನಾಲ್ಕುವರೆ ವರ್ಷದಿಂದ ಒಂದು ದಿನವೂ ಕುಟುಂಬದವರ ಜೊತೆ ಕಾಲ ಕಳೆಯದೆ ನಿರಂತರವಾಗಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಮಳೆಯಿಂದಾಗಿ ಭರ್ತಿಯಾಗಿರುವ ಹೊಳಲ್ಕೆರೆ ತಾಲ್ಲೂಕಿನ ಆಡನೂರು ಗ್ರಾಮದ ಕೆರೆಗೆ ಶುಕ್ರವಾರ ಬಾಗಿನ ಸಮರ್ಪಿಸಿ ಮಾತನಾಡಿದ ಶಾಸಕರು 250 ರಿಂದ 300 ಕೆರೆಗಳ ರಿಪೇರಿ, ಬ್ರಿಡ್ಜ್ ಕಂ ಬ್ಯಾರೇಜ್, ಹೊಸ ಕೆರೆ, ಚೆಕ್‍ಡ್ಯಾಂಗಳನ್ನು ಕಟ್ಟಿರುವುದರಿಂದ ಎಲ್ಲಾ ಕಡೆ ಕೆರೆ ಕಟ್ಟೆಗಳು ಭರ್ತಿಯಾಗಿದೆ.
ಮಾನವೀಯತೆಯಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಪಂಡರಹಳ್ಳಿ, ಬೆಂಕಿಕೆರೆ, ಮದುರೆಯಿಂದ ದೊಡ್ಡ ಲೈನ್ ತಂದು ಮೂವತ್ತು ಮೆ.ವಾ.ಇದ್ದ ವಿದ್ಯುತ್‍ಗೆ ಎಪ್ಪತ್ತು ಮೆ.ವಾ.ವಿದ್ಯುತ್ ಜೋಡಿಸಿದ್ದು, ಇನ್ನು 25 ವರ್ಷಗಳ ಕಾಲ ರೈತರಿಗೆ ದಿನಕ್ಕೆ ಏಳು ಗಂಟೆಗಳ ಕಾಲ ಕರೆಂಟ್ ನೀಡುತ್ತೇನೆ.
ಅದೇ ರೀತಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಕಾರಣಕ್ಕಾಗಿ ಆಡನೂರು ಗ್ರಾಮದಲ್ಲಿ ಮೂರು ಶಾಲೆಗಳನ್ನು ಕಟ್ಟಿಸಿದ್ದೇನೆ. ಕೆರೆ, ಆಸ್ಪತ್ರೆ, ಶಾಲೆ, ರಸ್ತೆ ಹೇಗೆ ನಿರ್ಮಾಣ ಮಾಡಬೇಕೆಂಬುದು ನನಗೆ ಗೊತ್ತಿದೆ. ಶಾಂತಿಸಾಗರದಿಂದಲೂ ಕುಡಿಯುವ ನೀರು ಬರುತ್ತಿದೆ. ಆದರೆ ವರ್ಷಕ್ಕೊಮ್ಮೆ ಕೆರೆ ಖಾಲಿಯಾದಾಗ ಕೆಸರು ನೀರು ಬರುವುದರಿಂದ ಕ್ಷೇತ್ರ ಜನತೆಗೆ ಕುಡಿಯುವ ನೀರಿಗೆ ಅಭಾವವಾಗಬಾರದೆನ್ನುವ ಕಾರಣಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ನೀಡುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರವಿಕುಮಾರ್, ಶ್ರೀನಿವಾಸ, ಮಂಜುನಾಥ, ಓಂಕಾರ್, ಗುರುಮೂರ್ತಿ ಹಾಗೂ ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.