ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್‍ಗಳನ್ನು ಅಳವಡಿಸುವ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸಂಸತ್‍ನಲ್ಲಿ ಸ್ಥಾಯಿ ಸಮಿತಿ ಮುಂದೆ ಮಂಡಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿ.ಸಿ.ಗೆ ಮನವಿ ಸಲ್ಲಿಸಲಾಯಿತು.
ರೈತ ಭವನದಿಂದ ಮೆರವಣಿಗೆ ಮೂಲಕ ಆಗಮಿಸಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿರುತ್ತದೆ ಎಂದು ನಂಬಿದ್ದೆವು. ರೈತರ ಸಾಲ ಮನ್ನ ಆಗಿಲ್ಲ.
ಹತ್ತು ಲಕ್ಷ ಕೋಟಿ ರೂ.ಸಾರ್ವಜನಿಕರ ಹಣದಲ್ಲಿ ಶ್ರೀಮಂತರ ಸಾಲ ಮನ್ನ ಆಗಿದೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್‍ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಸ್ಥಾಯಿ ಸಮಿತಿ ಮುಂದೆ ಮಂಡಿಸಿದ್ದು, ಚಳಿಗಾಲದ ಅಧಿವೇಶನದೊಳಗೆ ಕಾಯಿದೆ ಜಾರಿಗೆ ಬರಲಿದೆ. ರೈತರು ಇನ್ನಾದರೂ ಎಚ್ಚೆತ್ತುಕೊಂಡು ಹೋರಾಟಕ್ಕೆ ಇಳಿಯದಿದ್ದರೆ ಬದುಕು ದಿವಾಳಿಯಾಗುವುದರಲ್ಲಿ ಅನುಮಾನವಿಲ್ಲ. ಮಾಡು ಇಲ್ಲವೆ ಮಡಿ ಎನ್ನುವ ನಿರ್ಧಾರಕ್ಕೆ ಬರಬೇಕೆಂದು ರೈತರನ್ನು ಜಾಗೃತಿಗೊಳಿಸಿದರು.
ಹವಾಮಾನ ವೈಪರೀತ್ಯದಿಂದಾಗಿ ರಾಜ್ಯಾದ್ಯಂತ ಬೆಳೆ ನಷ್ಟವಾಗಿದ್ದು, ಅವೈಜ್ಞಾನಿಕ ಪರಿಹಾರ ನೀಡುವುದನ್ನು ಕೈಬಿಟ್ಟು ವಾಸ್ತವ ವೆಚ್ಚ ಆಧರಿಸಿದ ಬೆಳೆ ನಷ್ಟ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡುತ್ತ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಸ್ಮಾರ್ಟ್ ಮೀಟರ್‍ಗಳನ್ನು ಅಳವಡಿಸಿದರೆ ರೈತರು ಉಳಿಯಲು ಸಾಧ್ಯವಾ ಎನ್ನುವುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಎಂ.ಎಸ್.ಪಿ.ಯನ್ನು ಕಾನೂನುಬದ್ದಗೊಳಿಸಿ ರೈತರು ಬೆಳೆಯುವ ಎಲ್ಲಾ ಬಗೆಯ ಕೃಷಿ ಉತ್ಪನ್ನಗಳನ್ನು ವರ್ಷಪೂರ್ತಿ ಎಂ.ಎಸ್.ಪಿ.ದರದಲ್ಲಿ ಖರೀಧಿಸಲು ಖರೀಧಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಯಾವುದೇ ಕನಿಷ್ಠ ಆಮದು ಶುಲ್ಕವಿಲ್ಲದೆ ಭೂತಾನ್‍ನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗುವ ಪರಿಸ್ಥಿತಿ ಬಂದೊದಗಿದೆ. ಕೂಡಲೆ ಅಡಿಕೆ ಆಮದನ್ನು ನಿಲ್ಲಿಸಬೇಕು. ಅಕ್ರಮ-ಸಕ್ರಮ ಯೋಜನೆಯಡಿ ರಾಜ್ಯದಲ್ಲಿ ನೊಂದಣಿಯಾಗಿರುವ ಎಲ್ಲಾ ಪ್ರಕರಣಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಬೇಕು.
ಮುಂಗಾರು ಮಳೆ ಈ ಸಾಲಿನಲ್ಲಿ ಅಧಿಕವಾಗಿರುವುದರಿಂದ ಈರುಳ್ಳಿ, ಮೆಕ್ಕೆಜೋಳ, ತರಕಾರಿ, ಹೂವು ಬೆಳೆಗಳು ನಾಶವಾಗಿದ್ದು, ರೈತರ ಖಾತೆಗೆ ಕೂಡಲೆ ಪರಿಹಾರದ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ನಾಗರಾಜ್ ಮುದ್ದಾಪುರ ಇವರುಗಳು ಮಾತನಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಪ್ರಭು ಇಸಾಮುದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಯಾದವ್, ಪ್ರವೀಣ್, ಟಿ.ಎಲ್.ಎನ್.ಸ್ವಾಮಿ, ರವಿ ಕೋಗುಂಡೆ,
ರೈತ ಮಹಿಳೆಯರಾದ ಸುಧಮ್ಮ, ಸಿದ್ದಮ್ಮ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.