ಮಂಡ್ಯ: ಭಾರತ್ ಜೋಡೊ ಯಾತ್ರೆ ಈಗ ಜೆಡಿಎಸ್ ಭದ್ರಕೋಟೆಯಲ್ಲಿ ಮುಂದುವರೆದಿದೆ. ಕೊಡಗಿಗೆ ಹೋಗಬೇಕಾಗಿದ್ದ ಸೋನಿಯಾ ಹವಮಾನ ವೈಪರೀತ್ಯದಿಂದ ಮೈಸೂರಿನಲ್ಲಿಯೇ ತಂಗಿದ್ದರು. ದಸರಾ ಹಬ್ಬದ ಸಂಭ್ರಮದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದವನ್ನು ಪಡೆದರು. ಇದೀಗ ಇಂದಿನಿಂದ ಮಂಡ್ಯದಿಂದ ಶುರುವಾದ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಹೆಜ್ಜೆ ಹಾಕುತ್ತಿರುವುದು ಭಾರತ್ ಜೋಡೋ ಯಾತ್ರೆಗೆ ಮತ್ತಷ್ಟು ಕಳೆ ನೀಡಿದೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಯಾತ್ರೆ ಸಾಗುತ್ತಿದೆ. ಇಂದು ಪಾಂಡವಪುರದಿಂದ ಶುರುವಾದ ಯಾತ್ರೆ ಬ್ರಹ್ಮದೇವರಹಳ್ಳಿಯ ತನಕ ಸಾಗಲಿದೆ. ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಎಂದಿನಂತೆ ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಸೇರಿದಂತೆ ಇನ್ನಿತರರು ಹೆಜ್ಜೆ ಹಾಕಲಿದ್ದಾರೆ.
ಇನ್ನು ಜಕ್ಕನಹಳ್ಳಿಯಿಂದ ಸೋನಿಯಾ ಗಾಂಧಿ ಅವರು ಹೆಜ್ಜೆ ಹಾಕಿದ್ದರು. 15 ನಿಮಿಷಗಳ ಕಾಲ ನಡೆದ ಸೋನಿಯಾ ಗಾಂಧಿ, ರಾಜ್ಯ ನಾಯಕರ ಜೊತೆಗೆ ಚರ್ಚೆ ಕೂಡ ನಡೆಸಿದರು. ಎರಡು ದಿನದಿಂದ ಸೋನಿಯಾ ಗಾಂಧಿ ಮೈಸೂರಿನಲ್ಲಿಯೇ ಉಳಿದಿದ್ದರು. ಇಂದು ಮಗನ ಜೊತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದರು.