ಚನ್ನಪಟ್ಟಣ: ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಇಂದು ಚಾಲನೆ ನೀಡುವ ಆಹ್ವಾನ ಪತ್ರಿಕೆಯಲ್ಲಿ ಇದು ಸಿ ಪಿ ಯೋಗೀಶ್ವರ್ ಅವರ ಮೇರೆಗೆ ಬಿಡುಗಡೆಯಾಗಿರುವ ಅನುದಾನ ಎಂದು ಮುದ್ರಿಸಲಾಗಿತ್ತು. ಇದನ್ನು ಕಂಡ ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಸಿ ಪಿ ಯೋಗಿಶ್ವರ್ ಕಾರು ತಡೆದು, ಕಾರಿನ ಮೇಲೆ ಮೊಟ್ಟೆ ಎಸೆದು ಆಕ್ರೋಶ ಹೊರ ಹಾಕಿದ್ದಾರೆ.
ಗುದ್ದಲಿ ಪೂಜೆಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸದೆ ಇರುವ ಕಾರಣದಿಂದ ಗಲಾಟೆ ನಡೆದಿದೆ. ಗಲಾಟೆ ವೇಳೆ ಜೆಡಿಎಸ್ ಕಾರ್ಯಕರ್ತರು ಸಿಪಿ ಯೋಗೀಶ್ವರ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಘೋಷಣೆ ಕೂಗಿದ್ದಾರೆ. ಗುದ್ದಲಿ ಪೂಜೆ ನಡುವೆ ಪೊಲೀಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ.
ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗಾಗಿ 50 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು. ಚನ್ನಪಟ್ಟಣ ರಸ್ತೆಯ ಅಭಿವೃದ್ಧಿಗಾಗಿ ಇಬ್ಬರು ನಾಯಕರು ಸಿಎಂ ಬಳಿ ಮನವಿ ಮಾಡಿದ್ದರು. ಆದರೆ ಆಹ್ವಾನ ಪತ್ರಿಕೆಯಲ್ಲಿ ಸಿ ಪಿ ಯೋಗೀಶ್ವರ್ ಹೆಸರು ಮಾತ್ರ ಇತ್ತು. ಈ ಕಾರಣಕ್ಕಾಗಿ ಜೆಡಿಎಸ್ ನಾಯಕರು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.