ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿತ್ತು. ಒಂದು ಮೊದಲ ಬಾರಿಗೆ ದಸರಾ ಉದ್ಘಾಟನೆಯನ್ನು ರಾಷ್ಟ್ರಪತಿಗಳು ಮಾಡುತ್ತಿರುವುದಕ್ಕೆ. ಮತ್ತೊಂದು ಜಂಬೂ ಸವಾರಿಗೆ ಪ್ರಧಾನಿ ಮೋದಿ ಚಾಲನೆ ನೀಡುತ್ತಿರುವ ವಿಚಾರಕ್ಕೆ. ಹಲವು ದಿನಗಳಿಂದ ಜಂಬೂ ಸವಾರಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ ಎಂಬ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದೀಗ ಸಚಿವ ಎಸ್ ಟಿ ಸೋಮಶೇಖರ್ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಜಂಬೂ ಸವಾರಿಗೆ ಚಾಲನೆ ನೀಡುವುದಕ್ಕೆ ಪ್ರಧಾನಿ ಮೋದಿ ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರಪತಿ ಬರುವ ಕಾರ್ಯಕ್ರಮದ ಬಗ್ಗೆ ಪಟ್ಟಿ ಅಂತಿಮವಾಗುತ್ತಿದೆ. ಅರಮನೆಯ ಭೇಟಿ ಬಗ್ಗೆಯೂ ಮಾಹಿತಿ ಕೇಳಲಾಗಿದೆ. ಆದರೆ ಇನ್ನು ರಾಷ್ಟ್ರಪತಿಗಳಿಂದ ಅದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ. ಆದರೆ ಜಂಬೂ ಸವಾರಿ ಪುಷ್ಪಾರ್ಚನೆಗೆ ಪಿಎಂ ಮೋದಿ ಬರುತ್ತಿಲ್ಲ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ಕೇಂದ್ರದ ನಾಲ್ಕು ಸಚಿವರು ದಸರಾ ಉದ್ಘಾಟನ ಸಮಯದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ದಸರಾ ಪಾಸ್ ಮತ್ತು ಗೋಲ್ಡ್ ಕಾರ್ಡ್ ಬಗ್ಗೆ ಸಂಜೆಯೊಳಗೆ ಅಂತಿಮವಾಗುತ್ತದೆ. ಈ ಬಾರಿಯ ದಸರಾದ ವಿದ್ಯುತ್ ಅಲಂಕಾರಕ್ಕೆ ಸಿಎಂ ಬೊಮ್ಮಾಯಿ ಅವರು 4.5 ಕೋಟಿ ಹಣ ನಿಗದಿ ಮಾಡಲಾಗಿದೆ. ಎಲ್ಲವನ್ನು ವ್ಯವಸ್ಥಿತವಾಗಿ ಮಾಡುತ್ತೇವೆ ಎಂದಿದ್ದಾರೆ.