ಬೆಂಗಳೂರು: ರಾಜ್ಯಾದ್ಯಂತ ಮಳೆಯ ಅಬ್ಬರ ಇನ್ನು ಕಡಿಮೆಯಾಗಿಲ್ಲ. ಮಳೆಯ ಅಬ್ಬರಕ್ಕೆ ಹಲವೆಡೆ ಗ್ರಾಮಗಳು ಮುಳುಗಡೆಯಾಗುತ್ತಿವೆ. ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಕೆಲವೊಂದು ಜಿಲ್ಲೆಗಳಲ್ಲಿ ಜನರಿಗೆ ಊಟವೂ ಸಿಗುತ್ತಿಲ್ಲ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ನಿಂತರೆ ಸಾಕು ಎನ್ನುತ್ತಿದ್ದಾರೆ ಜನ. ಆದರೆ ಇನ್ನೂ ಎರಡು ದಿನ ಮಳೆಯಾಗುವ ಸೂಚನೆ ಇರುವುದರಿಂದ ಜನ ಮತ್ತಷ್ಟು ಕಂಗಲಾಗಿದ್ದಾರೆ.
ಗದಗ ಜಿಮ್ಸ್ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಅದರಲ್ಲೂ ಔಷಧ ಮಳಿಗೆಗೆ ಮಳೆ ನೀರು ನುಗ್ಗಿದೆ. ಕೋಟ್ಯಾಂತರ ರೂಪಾಯಿ ಔಷಧ ದಾಸ್ತಾನು ನೀರಿನಿಂದ ಮುಳುಗಡೆಯಾಘಿದೆ. ಸದ್ಯ ಔಷಧವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರಿಂದ ರೋಗಿಗಳಿಗೂ ಪರದಾಟವಾದಂತಾಗಿದೆ.
ಇನ್ನು ಯಾದಗಿರಿ ಜಿಲ್ಲೆಯಲ್ಲಿ ಪ್ರೌಢಶಾಲೆಗೆ ನೀರು ನುಗ್ಗಿದೆ. ವಡಗೇರ ತಾಲೂಕಿನ ಕೊಂಕಲ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ವಿರುದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ಬದಾಮಿ ತಾಲೂಕಿನಲ್ಲಿ ಪ್ರವಾದ ಸ್ಥಿತಿ ಉಂಟಾಗಿದೆ. ಸುತ್ತ ಮುತ್ತಲಿನ ಗ್ರಾಮಗಳು ನೀರಿನಿಂದ ಸಮಸ್ಯೆ ಎದುರಾಗಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದೆ. ಮೊಣಕಾಲುದ್ದ ನೀರು ನಿಂತಿದ್ದು, ಜನರ ನಿದ್ದೆ ಇಲ್ಲದ ದಿನಗಳನ್ನು ಕಳೆಯುತ್ತಿದ್ದಾರೆ. ಹಲವರು ಈಗಾಗಲೇ ಬೇರೆ ಕಡೆಗೆ ಸ್ಥಳಾಂತರವಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಬಾರಿ ಮಳೆಯಿಂದಾಗಿ ಸುಮಾರು 373 ಮನೆಗಳಿಗೆ ಹಾನಿಯಾಗಿದೆ.